Skip to main content

Posts

Showing posts from December, 2024

ಪ್ರಕೃತಿ ಹೊಡೆತ

         *ಪ್ರಕೃತಿ ಹೊಡೆತ* *(ಭಾಮಿನಿ ಷಟ್ಪದಿ)* ಬೀಸಿ ಬರುತಿಹ ಚಂಡ ಮಾರುತ ಬೀಸಿ ಹೊಡೆಯಿತು  ಜೀವ ರಾಶಿಗೆ ನಾಶವಾಯಿತು ಬೆಳೆದ ಬೆಳೆಗಳು  ಮಳೆಯ ರಭಸಕ್ಕೆ ಹಾಸಿ ಹೊದೆದಿಹ ಹಸಿರು ಸಂಪದ ಘಾಸಿಗೊಂಡಿತು  ಬೀಸು ಗಾಳಿಗೆ ತೋಷವೆಲ್ಲವು ಹೊರಟು ಹೋಯಿತು ರುದ್ರ ನರ್ತನಕೆ ಸದ್ದು ಮಾಡುತ  ಸುರಿದ  ನೀರಲಿ ಬಿದ್ದು ನರಳಿತು ಪಕ್ಷಿ ಸಂಕುಲ ಯುದ್ದ  ಭೂಮಿಯ  ತೆರದಿ  ಕಂಡಿತು ಧರೆಯ ಮಡಿಲೆಲ್ಲ ಹದ್ದು ಮೀರಿದ ಮನುಜನಾಟಕೆ ಗುದ್ದು ಕೊಟ್ಟನೆ  ಮಲ್ಲಿನಾಥನು ಗದ್ದೆ ಬಯಲಲಿ  ಬೆಳೆದ ಬೆಳೆಗಳು ನೆಲವ ಕಚ್ಚಿಹುದು ತುಂಬು ಗರ್ಭಿಣಿಯನ್ನು ಹೋಲುವ ತುಂಬಿ ತುಳುಕುವ ಹಸಿರು ಹೊನ್ನನು ನಂಬಿ ನಡೆಯದೆ  ಸ್ವಾರ್ಥಿ ಮನುಜನು ಹರಣ ಮಾಡಿದನು ಕಂಬದಂತಿಹ ಗುಡ್ಡ ಬೆಟ್ಟವ ಹುಂಬ ತನದಲಿ ಕಡಿದುರುಳಿಸಿದ - -ನೆಂಬ ಕಾರಣಕಿಂದು ಬಂದಿದೆ ಕಷ್ಟ ಕೋಟಲೆಯು *ಪಂಕಜಾ.ಕೆ.ರಾಮಭಟ್*