68 ವ್ಯಾಪಾರ ವ್ಯಾಪಾರ ವ್ಯವಹಾರ ನಮ್ಮಂತವರಿಗಲ್ಲ ಇದನ್ನೆಲ್ಲಾ ಬಿಟ್ಟು ಚೆನ್ನಾಗಿ ಓದಿ ಒಳ್ಳೆಯ ಕೆಲಸ ಸಂಪಾದಿಸು ಎಂದು ತಂದೆಯವರು ಸುಶಾಂತನನ್ನು ದಿನಾ ತರಾಟೆಗೆ ತೆಗೆದು ಕೊಳ್ಳುತ್ತಿದ್ದರು. ತನಗೆ ಎಲೆಕ್ಟ್ರಾನಿಕ್ ಬಿಡಿ ಬಾಗಗಳ ವ್ಯಾಪಾರದ ಬಗ್ಗೆ ಆಸಕ್ತಿ ಇದ್ದರೂ ತಂದೆಯನ್ನು ನೋಯಿಸಲಾಗದೆ ವಿದ್ಯಾಭ್ಯಾಸ ಮಾಡಿ ಸಣ್ಣ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ ಅವನಿಗೆ ಕೊರೊನಾದ ಕಾರಣದಿಂದ ಕೆಲಸ ಕಳೆದುಕೊಂಡಾಗ , ಎಲೆಕ್ಟ್ರಾನಿಕ್ ಬಿಡಿ ಬಾಗದ ವ್ಯಾಪಾರವೇ ಕೈ ಹಿಡಿಯಿತು. 69 ವಿದಾಯ ಪ್ರೀತಿ ಎಂದು ಭಾವಿಸಿ ತನ್ನನ್ನು ಹೆತ್ತು ಹೊತ್ತು ಸಾಕಿದ ತಂದೆ ತಾಯಿಯರನ್ನು ಬಿಟ್ಟು ಅವನ ಹಿಂದೆ ಬಂದ ಅವಳು, ತಾನು ಪ್ರೀತಿಸಿದ್ದು ಒಬ್ಬ ಅಯೋಗ್ಯನನ್ನು ಎಂಧು ತಿಳಿದಾಗ ಅವನ ಕಪಿ ಮುಷ್ಟಿಯಿಂದ ತಪ್ಪಿಸಿ ಬಂದು ಬದುಕಿಗೆ ವಿದಾಯ ಹೇಳಲು ನಿಶ್ಚಯಿಸಿದಾಗ ಅವಳನ್ನು ರಕ್ಷಿಸಿದ ಅವರ ಹಿತೋಪದೇಶದಿಂದ ಆಕೆ ತನ್ನ ಮುಂದಿನ ದಾರಿಯನ್ನು ಆಯ್ಕೆಮಾಡಿಕೊಂಡಳು 70 ಮೋಹದ ಜಾಲ ಆತ ಮೋಸಗಾರನೆಂದು ತಿಳಿಯದೆ ಆಕೆ ಆತನ ಮೋಹದ ಜಾಲದಲ್ಲಿ ಸಿಲುಕಿ ಅವನ ಜತೆ ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಹೊರಟು ಬಂದಿದ್ದಳು.ಮಹಾನಗರದ ಆ ವೈಭವೋಪೇತ ಹೋಟೆಲ್ ನ ರೂಮಿನಿಂದ ಹೇಗೋ ತಪ್ಪಿಸಿ ಕೊಂಡು ಬಂದ ಆಕೆ ತನ್ನೂರಿನ ದಾರಿಯನ್ನು ಹಿಡಿದು ನಿಟ್ಟುಸಿರು ಬಿಟ್ಟಳು.
ಪ್ರೀತಿಸೆಲೆ ನನ್ನವಳು ನನ್ನವಳ ಮೊಗದಲ್ಲಿ ನಗೆ ಮಲ್ಲಿಗೆಯು ಅರಳಿ ಬನ್ನವದು ಕಳೆಯುತಿದೆ. ಮೈ ಮನಸಿನ ಕನ್ನವನು ಹಾಕುತಿದೆ ಹರಡಿರುವ ಮುಗುಳುನಗೆ ಹೊನ್ನಾಗಿ ಕಾಡುತಿದೆ ಸವಿ ನೆನಪಿನ ಕಣ್ಣಲ್ಲೇ ಕಾಡುತ್ತ ಮೈಮನವ ಮರೆಸುತ್ತ ಸಣ್ಣನೇ ಹಾಡನ್ನು ಗುನುಗುತಿಹಳು ಬಣ್ಣನೆಗೆ ಸಿಲುಕದಿಹ ಒಡನಾಟ ಕೊಡುತಿದ್ದು ನನ್ನೆದೆಯ ಗೂಡಲ್ಲಿ ನಲಿಯುತಿಹಳು ಮುದ್ದಾದ ಮಕ್ಕಳನು ಬೆಳೆಸಲಿಕೆ ಹೆಗಲಾಗಿ ಸದ್ದಿಲ್ಲದೆ ಕೆಲಸವನು ಮಾಡುತಿಹಳು ಕದ್ದು ನೋಡುವ ನೋಟ ಕೆನ್ನೆಯಲಿ ಕೆಂಪಾಗಿ ಮುದ್ದು ಮುದ್ದಾಗಿ ಕಾಣುತಿಹಳು ಮನೆಯನ್ನು ಬೆಳಗುತ್ತ ತನ್ನಿರವ ಮರೆಯುತ್ತ ನನಗಾಗಿ ಜೀವವನು ತೇಯುತಿಹಳು ಹೊನಲಾಗಿ ಪ್ರೀತಿಯನು ಹರಿಸುತ್ತಲಿರುತಿದ್ದು ಕನಸನ್ನು ಮನದಲ್ಲಿ ಬಿತ್ತುತಿಹಳು ಪಂಕಜಾ. ಕೆ.ರಾಮಭಟ್