ಪ್ರೀತಿಸೆಲೆ ನನ್ನವಳು
ನನ್ನವಳ ಮೊಗದಲ್ಲಿ ನಗೆ ಮಲ್ಲಿಗೆಯು ಅರಳಿ
ಬನ್ನವದು ಕಳೆಯುತಿದೆ. ಮೈ ಮನಸಿನ
ಕನ್ನವನು ಹಾಕುತಿದೆ ಹರಡಿರುವ ಮುಗುಳುನಗೆ
ಹೊನ್ನಾಗಿ ಕಾಡುತಿದೆ ಸವಿ ನೆನಪಿನ
ಕಣ್ಣಲ್ಲೇ ಕಾಡುತ್ತ ಮೈಮನವ ಮರೆಸುತ್ತ
ಸಣ್ಣನೇ ಹಾಡನ್ನು ಗುನುಗುತಿಹಳು
ಬಣ್ಣನೆಗೆ ಸಿಲುಕದಿಹ ಒಡನಾಟ ಕೊಡುತಿದ್ದು
ನನ್ನೆದೆಯ ಗೂಡಲ್ಲಿ ನಲಿಯುತಿಹಳು
ಮುದ್ದಾದ ಮಕ್ಕಳನು ಬೆಳೆಸಲಿಕೆ ಹೆಗಲಾಗಿ
ಸದ್ದಿಲ್ಲದೆ ಕೆಲಸವನು ಮಾಡುತಿಹಳು
ಕದ್ದು ನೋಡುವ ನೋಟ ಕೆನ್ನೆಯಲಿ ಕೆಂಪಾಗಿ
ಮುದ್ದು ಮುದ್ದಾಗಿ ಕಾಣುತಿಹಳು
ಮನೆಯನ್ನು ಬೆಳಗುತ್ತ ತನ್ನಿರವ ಮರೆಯುತ್ತ
ನನಗಾಗಿ ಜೀವವನು ತೇಯುತಿಹಳು
ಹೊನಲಾಗಿ ಪ್ರೀತಿಯನು ಹರಿಸುತ್ತಲಿರುತಿದ್ದು
ಕನಸನ್ನು ಮನದಲ್ಲಿ ಬಿತ್ತುತಿಹಳು
ಪಂಕಜಾ. ಕೆ.ರಾಮಭಟ್
Comments
Post a Comment