ಮುಂಜಾನೆ
ಬಾನಲಿ ಚೆಲುವಿನ ಚಿತ್ತಾರವ ಬಿಡಿಸಿ
ಓಡುತ ಬಂದನು ಮೂಡಣದಿ ರವಿತೇಜ
ಬೆಳಗಿನ ಬೆರಗನು ನೋಡುವ ಬಾಲೆ
ಪ್ರಕೃತಿಯ ಸೊಬಗಿದು ಚಂದದ ಲೀಲೆ
ಬಾಂದಳದಲ್ಲಿ ಸೂರ್ಯ ಚಂದ್ರರ ಆಟ
ಆಗಸ ತುಂಬಾ ಹರಡಿದ ಬಣ್ಣದ ನೋಟ
ಮಾಗಿಯ ಚಳಿಗಾಳಿಯು ಬೀಸುತಿದೆ
ಇಬ್ಬನಿ ಮುತ್ತಿನ ತೆರದಲಿ ಸುರಿಯುತಿದೆ
ಹಸಿರ ಹುಲ್ಲಿನ ಹಾಸಿಗೆಯಲಿ ಮುತ್ತಿನ ಮಣಿ
ರವಿತೇಜನ ಸ್ಪರ್ಶಕೆ ನಾಚುವ ಗಣಿ
ಭೂರಮೆಯಲಿ ಬಿರಿದರಳಿದೆ ಸೌಂದರ್ಯ
ಕಾಣುವ ಮನದಲಿ ಏನೋ ಆನಂದ
ಮೌನಗೀತೆಯ ನುಡಿಸುತ ನಿಂತಿದೆ ಪ್ರಕೃತಿ
ಕಳೆಯುತ್ತಿದೆ ಮೈಮನದ ವಿಕೃತಿ
ಬೆಳಗಿನ ಬೆರಗಿನಲಿ ಮೈತುಂಬಿದೆ ಪ್ರಕೃತಿಯ ರಮಣೀಯತೆ
ಸವಿಯುವ ಕಣ್ಣಲ್ಲಿದೆ ಮನ ಮೋಹಕತೆ
ಪಂಕಜಾ.ಕೆ.
Comments
Post a Comment