ಗಜಲ್
ನದಿ ದಡದ ಮೇಲೆ ಭುಜಕ್ಕೆ ಭುಜ ಹಚ್ಚಿ ನೀರಿಗೆ ಕಲ್ಲೆಸೆದದ್ದು ಮರೆತೆಯಾ
ತರಂಗಗಳನ್ನೆಬ್ಬಿಸುವ ಅಲೆಗಳನು ಕಂಡು ಕುಣಿದದ್ದು ಮರೆತೆಯ
ಕೈ ಕೈ ಹಿಡಿದು ದಂಡೆಗುಂಟ ಓಡಿಯಾಡಿದ್ದೇವಲ್ಲವೇ
ಮುಳುಗುವ ರವಿಯನ್ನು ಕಂಡು ಕಣ್ಣೊಳಗೆ ಇಣುಕಿದ್ದು ಮರೆತೆಯಾ
ಪ್ರೀತಿಯ ಕಡಲಲ್ಲಿ ಮುಳುಗಿಸಿ ಹುಚ್ಚು ಹಿಡಿಸಿದೆಯಲ್ಲವೇ
ನೀಲಾಗಸದ ಸೊಬಗನ್ನು ಸವಿಯುತ್ತಾ ತೋಳು ಬೆಸೆದದ್ದು ಮರೆತೆಯಾ
ಮನದಾಳದ ನೋವುಗಳನ್ನು ನಿನ್ನೊಡನೆ ಹಂಚಿಕೊಂಡಿದ್ದೆಯಲ್ಲವೇ
ಬರಡಾದ ಬದುಕಿಗೆ ಜೀವ ತುಂಬುವೆಯೆಂದಿದ್ದು ಮರೆತೆಯಾ
ನನ್ನ ಪ್ರೀತಿಯನ್ನು ನಿರಾಕರಿಸಿ ಹೇಳದೆ ಹೋಗಬಹುದೇ ಹೇಳು
ಜೀವನಪೂರ್ತಿ ನಿನ್ನ ಜತೆಯಲ್ಲಿ ಇರುವೆನೆಂದಿದ್ದು ಮರೆತೆಯಾ
ನಿನ್ನ ನೆನಪಿನಲ್ಲಿ ನಾನಿಂದು ಹುಚ್ಚನಾಗಿರುವೆ ತಿಳಿದಿದೆಯೇ ನಿನಗೆ
ಆಕಾಶವೇ ಮೈಮೇಲೆ ಬಿದ್ದರೂ ನಿನ್ನೊಡನೆ ಬರುವೆನೆಂದಿದ್ದು ಮರೆತೆಯಾ
ಆಸೆಯ ದೀಪಕ್ಕೆ ತೈಲ ತುಂಬಿ ಉರಿಸಿದ್ದು ತಪ್ಪಲ್ಲವೇ ಪಂಕಜಾ
ನಿನ್ನ ಹೆಸರಿನ ಜತೆ ನನ್ನ ಹೆಸರು ಸೇರಿಸಿ ಗೀಚಿದ್ದು ಮರೆತೆಯಾ
ಪಂಕಜಾ.ಕೆ
Comments
Post a Comment