ವಾರಕ್ಕೊಂದು ಕವನ ಸ್ಪರ್ಧೆ
ದತ್ತ ಪದ....ಕಾನನ. ..ಕಹಳೆ..ತಾಂಡವ..ಸಿಡಿಲು.
.
ವರುಣನ ಅಬ್ಬರ
ಅರಳಿರುವ ಹೂಗಳ ಗಂಧಗಳನು ಹೊತ್ತು
ಕಾನನದ ಎಡೆಯಿಂದ ಬೀಸಿ ಬರುತಿದೆ ತಂಗಾಳಿ
ಶುಕಪಿಕಗಳ ಗಾನದ ಮಾಧುರ್ಯ ತುಂಬಿ
ಮುದುಡಿದ ಮನಗಳ ಅರಳಿಸುತ್ತಿದೆ ಮೈದುಂಬಿ
ಮೂಡಣದ ಬಾನಲಿ ಬಂದಿತು ಚಿನ್ನದ ತಟ್ಟೆ
ಬಾಂದಳದಿ ಬಣ್ಣಗಳ ಕಲಸಿ ಹೊಳೆಯುತಿದೆ
ಭೂದೇವಿಯ ಮುಕುಟಕ್ಕೆ ಹಾಸಿದ ಮಂಜಿನತೆರೆ
ಸರಿಸುತ ಬರುತಿದೆ ಬಾಸ್ಕರನ ಹೊಂಬಿಸಿಲು
ಅಬ್ಬಾ ಏನಿದು ಬೆರಗಿನ ಈ ಸುಂದರ ನೋಟ
ಪ್ರಕೃತಿ ದೇವಿಯ ಸೌಂದರ್ಯದ ಅನಾವರಣ
ಕಣ್ಣು ಮನ ಸೆಳೆಯುವ ಮೋಹಕ ಚೆಲುವು
ರಸಿಕರ ಮನದಲಿ ತುಂಬುತಿದೆ ಬಣ್ಣದ ಕನಸು
ಎಲ್ಲಿಂದಲೋ ಕೇಳುತಿದೆ ಕಹಳೆಯ ಅಬ್ಬರದ ಧ್ವನಿ
ತುಂಬಿತು ಬಾನಿನಲಿ ಕರಿಮೋಡಗಳ ದಂಡು
ಸಿಡಿಲು ಗುಡುಗುಗಳ ಅಬ್ಬರದ ಸದ್ದು ತುಂಬಿ
ಮುಸುಕಿದ ಕತ್ತಲೆಯ ಎಡೆಯಿಂದ ಚಿಮ್ಮಿತು ಮಿಂಚು
ರುದ್ರ ತಾಂಡವ ನೃತ್ಯ ವಾಡುತ
ಸುರಿಯುತಿದೆ ಮಳೆ ನೀರ ಧಾರೆ
ಹರುಷದ ಕಡಲಾಯಿತು ವಸುಂಧರೆಯ ಮನ
ವರುಣನ ಒಲವ ಸವಿದು ತೃಪ್ತಳಾಗಿ ತನನ
ಪಂಕಜಾ.ಕೆ. ಮುಡಿಪು 19.4 2020
Comments
Post a Comment