ತಂಪಾದ ಇಳೆ
ಮೊದಲ ಮಳೆಯು ತಂದಿತು ತಂಪು
ಹಬ್ಬಿತು ಎಲ್ಲೆಡೆ ಮಣ್ಣಿನ ಕಂಪು
ನರ್ತಿಸುತ್ತಿದೆ ನವಿಲುಗಳ ಗುಂಪು
ಕವಿಮನದಲಿ ತುಂಬುತಿದೆ ಭಾವನೆಗಳ ಇಂಪು
ಬಾಂದಳದಿ ಕಪ್ಪನೆಯ ಮುಗಿಲು ಕಟ್ಟಿದೆ
ತಂಪಾದ ಗಾಳಿಯು ಜೋರಾಗಿ ಬೀಸುತಿದೆ
ಮಳೆಯ ಒಂದೊಂದು ಹನಿಯೂ ಮುತ್ತಾಗಿದೆ
ವರುಣ ಸುರಿಸಿದ ನೀರು ಇಳೆಯ ಸೊತ್ತಾಗಿದೆ
ಬಿರು ಬಿಸಿಲ ಬೇಗೆಗೆ ಬೆಂದು ಬಸವಳಿದ ಧರೆಗೆ
ವರುಣನೊಲವಿನ ಸ್ಪರ್ಶದಲಿ ನವಿರು ಕಂಪನ
ವಸುಂಧರೆಯ ಒಡಲೆಲ್ಲಾ ತಂಪಾಯಿತು
ನೆಲದೊಡಲ ಬೀಜಗಳು ಟಿಸಿಲೊಡೆಯಿತು
ಸಿಡಿಲು ಮಿಂಚಿನ ಅಬ್ಬರಕೆ ಭೂತಾಯಿ ತತ್ತರ
ಬಿರುಗಾಳಿಯು ಹೊಡತಕೆ ತರುಲತೆಗಳ ನರ್ತನ
ಪಟಪಟನೆ ಬೀಳುವ ಮಳೆಯ ನೀರಧಾರೆ
ವರುಣ ಸುರಿಸುವ ಅಮೃತಧಾರೆ
ರೈತನರಮನೆಗೆ ತಂದಿತು ಹರ್ಷ
ಬೆಳೆಬೆಳೆಯುವ ಕಾತುರ ತುಂಬಿದೆ ವರ್ಷ
ನೇಗಿಲನು ಹಿಡಿದು ನಡೆಯುವನಾತ
ಮಳೆ ಗಾಳಿಗೂ ಬೆಚ್ಚದೆ ದುಡಿವನೀತ
ಪಂಕಜಾ.ಕೆ. ಮುಡಿಪು
Comments
Post a Comment