ಹನಿ ಹನಿ ಇಬ್ಬನಿ ವಿಸ್ಮಯ ಸ್ಪರ್ಧೆಗಾಗಿ. ಸ್ಪರ್ಧೆ ...3
(ಮಕ್ಕಳ ಕವನ)
ಹುಣ್ಣಿಮೆ ಚಂದಿರ
ಮೋಡದ ಮರೆಯಲಿ ಮುಖವನು
ಮರೆಸಿ ಚಂದಿರ ಇಣುಕುವನು
ಬೆಳ್ಳಿಯ ತಟ್ಟೆಯ ತೆರದಲಿ
ಹೊಳೆಯುತ ಬಾನಲಿ ಚಲಿಸುವನು
ನಾನು ಓಡಲು ತಾನೂ ಓಡುತ
ನನ್ನಯ ಜತೆಯಲಿ ಬರುತಿಹನು
ಹಾಲಿನ ಬೆಳಕನು ಭೂಮಿಗೆ ಹರಡುತ
ಮನಕೆ ಮುದವನು ತುಂಬುವನು
ಗುಂಡಗೆ ಹೊಳೆಯುತ ಬಾನಲಿ ತೇಲುತ
ಚಿಣ್ಣರ ಮನವನು ಸೆಳೆಯುವನು
ತಾರೆಗಳ ತೋಟದ ಮಧ್ಯದಲಿರುತ
ರಾಜನ ತೆರದಲಿ ಕಾಣುವನು
ನನ್ನಯ ಗೆಳತನ ಬಯಸುತ ಚಂದಿರ
ನನ್ನೆಡೆ ನೋಡಿ ನಗುತಿಹನು
ರೆಕ್ಕೆಯು ಇದ್ದರೆ ಚಂದಿರ ಲೋಕಕೆ
ನಾನೂ ಹೋಗುವೆ ಬಿಡು ಅಮ್ಮ
ಪಂಕಜಾ.ಕೆ.
Comments
Post a Comment