ಹಗಲು..ರಾತ್ರಿ..
ಕತ್ತಲ ತೆರೆಯನು ಸರಿಸುತ ಧರೆಗೆ
ಬೆಳಕನು ಹರಡುತಬಂದನು ಬುವಿಗೆ
ಬಾನಲಿ ಕಲಸಿದ ಚೆಲುವಿನ ಬಣ್ಣ
ಹರಡಿತು ಎಲ್ಲೆಡೆ ರವಿತೇಜನ ಕಿರಣ
ಮುಸುಕಿದ ಮಂಜಿನ ತೆರೆಯದು ಸರಿದು
ಹಬ್ಬಿತು ಎಲ್ಲೆಡೆ ಸುಂದರ ಬೆಳಗು
ಅರಳುವ ಹೂಗಳ ಪರಿಮಳ ತುಂಬಿ
ಮಧುವನು ಹೀರಲು ಬರುತಿವೆ ದುಂಬಿ
ಎಲ್ಲೆಡೆ ತುಂಬಿತು ಬೆಳಕಿನ ಕಿರಣ
ನೆನೆಯಿತು ಮನಸು ದೇವನ ಕರುಣ
ಚಿಲಿಪಿಲಿ ಗುಟ್ಟುತ ಹಾರುವ ಹಕ್ಕಿಗಳ ದಂಡು
ಮನದಲಿ ತುಂಬಿತು ಹರುಷದ ತುಂಡು
ಮನಸಿನ ತಮವನು ಕಳೆಯುತ ಬರಲು
ಮೈಮನವೆಲ್ಲಾ ತುಂಬಿತು ಅಮಲು
ಬಿಸಿಲಿನ ತಾಪಕೆ ಹರಿಯಿತು ಮೈಯಲಿ ಬೆವರು
ತಂಪಿನ ಗಾಳಿಯು ತಂದಿತು ಹುರುಪು
ನಿಶೆಯೊಡನಾಡಲು ತೆರಳಲು ರವಿಯು
ಹರಡಿತು ಇಳೆಯಲಿ ಕತ್ತಲ ಸೆರಗು
ಕತ್ತಲ ಸೆರಗನು ಸರಿಸುತ ಶಶಿಯು
ತಾರೆಗಳನೊಡನಾಡುತ ತುಂಬಿದ ಬೆಳಕು
ಚಂದಿರ ತಂಪಲಿ ನಲಿಯಿತು ತನುವು
ಸೆಳೆಯಿತು ಬೆಳದಿಂಗಳು ರಸಿಕರ ಮನವ
ಹೊಳೆಯುವ ಚಂದ್ರನ ಮೊಗವನು ಕಂಡು
ಅರಳಿತು ನೈದಿಲೆ ಕೊಳದಲಿ ನಿಂದು
ಪಂಕಜಾ ಕೆ.
Comments
Post a Comment