ಸ್ಪರ್ಧೆಗಾಗಿ
ದತ್ತಪದ. ಸ್ನೇಹದ ಕಡಲಲ್ಲಿ ಮುಸ್ಸಂಜೆ ಹೊತ್ತಿನಲಿ
ಗೆಳೆತನ
ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು
ಜತೆಯಾದೆ ನೀ ನನ್ನ ಕನಸುಗಳ ಸೆಳೆದು
ನೋಯುವ ಮನಸಿಗೆ ತಂಗಾಳಿಯಾದೆ ನೀನು
ನಿನ್ನೊಲವ ಸಾಂತ್ವನಕೆ ಮೈಮರೆತೆ ನಾನು
ಏಕಾಂತದ ಒಂಟಿತನಕೆ ಜತೆಯಾದೆಯಲ್ಲ
ಕನಸಿನ ಗೋಪುರವ ನೀ ಕಟ್ಟಿದೆಯಲ್ಲ
ಹೊಸತನವ ತುಂಬುತಾ ಮನಸೂರೆಗೊಂಡೆ
ನಿನ್ನ ಸ್ನೇಹವೆಂಬ ಅಮೃತದ ಜಲದಲ್ಲಿ ನಾ ಮುದಗೊಂಡೆ
ಮುಂಗಾರು ಮಳೆಯಂತೆ ತಂಪು ನಿನ್ನ ಸ್ನೇಹ
ನನ್ನೆದೆಯ ತುಂಬಾ ಅನುರಣಿಸಿದೆ ನಿನ್ನ ಸ್ನೇಹ
ಮಧುರಾನುಭೂತಿಯಲಿ ಮುಳುಗಿಸಿದೆ ನಿನ್ನ ಸ್ನೇಹ
ಕತ್ತಲೆಯ ಬಾಳಿಗೆ ಪೂರ್ಣ ಚಂದಿರನ ತಂಪು ನಿನ್ನಸ್ನೇಹ
ಗೆಳೆತನವೆಂಬ ದೋಣಿಯಲಿರುವ ತಂಪು
ಬಾಳದೋಣಿಯಲೂ ಅದರದೇ ಇಂಪು
ಕಷ್ಟ ಸುಖ ಎಲ್ಲಕ್ಕೂ ಜತೆಯಾಗುವ ನಂಟು
ಬಿಡಿಸಲಾರದ ಬಂಧ ಸ್ನೇಹದಾ ಗಂಟು
ಸ್ನೇಹದ ಕಡಲಲ್ಲಿ ಮುಸ್ಸಂಜೆ ಹೊತ್ತಿನಲಿ
ಕಂಡ ಕನಸಿಗೆ ನೀಹಿಡಿದೆ ಕನ್ನಡಿ
ನೊಂದ ಮನಸಿಗೆ ನೀ ಬರೆದೆ ಮುನ್ನುಡಿ
ನಗುವ ಹಿಂದಿನ ನೋವ ಮರೆಸುತಿದೆ ಸ್ನೇಹ
ಕತ್ತಲೆಯ ಹಾದಿಗೆ ಮುಂಬೆಳಕು ಸ್ನೇಹ
ಪಂಕಜಾ ಕೆ.
Comments
Post a Comment