ಗಿಡ ಮರ ಬೆಳೆಸಿ
ವಿಶ್ವ ಪರಿಸರ ದಿನಕೆ ಕಾಯದೆ
ಗಿಡಮರಗಳ ಬೆಳೆಸಿರಿ
ಹಸಿರು ತುಂಬಿದ ಧರೆಯ ಒಡಲನು
ಕಡಿದು ಬಿಸುಡದೆ ಉಳಿಸಿರಿ
ಉಸಿರು ಕೊಡುವ ಹಸಿರು ಗಿಡಗಳು
ಧರೆಯ ಚೆಲುವನು ಹೆಚ್ಚಿಸಿದೆ
ತಂಪು ಗಾಳಿಯ ಬೀಸಿ ತನುವಿಗೆ
ಹುರುಪು ಉಲ್ಲಾಸ ತುಂಬಿದೆ
ಕಾಡಿನೆಡೆಯಲಿ ನಲಿಯುತಿರುವ
ಹಕ್ಕಿ ಸಂಕುಲ ಉಳಿಸಿರಿ
ಜೀವ ಜಗತ್ತಿನ ವೈಚಿತ್ರ್ಯಗಳ
ತೆರೆದು ತೋರುತ ಬೆರೆಯಿರಿ
ಬಿಸಿಲ ಬೇಗೆಯ ತಣಿಸಿ ಬಿಡುವುದು
ಶುದ್ಧ ಗಾಳಿಯ ಬೀಸುತ
ಮೈಮನಕೆ ಹುರುಪು ತುಂಬಿಸಿ
ತನುವ ಬೇಸರ ಮರೆಸುತ
ಬಣ್ಣ ಬಣ್ಣದ ಹೂಗಳರಲುತ
ಕಣ್ಣು ಮನವನು ತುಂಬಿದೆ
ಮರದ ಮೇಲ್ಗಡೆ ಕುಳಿತು ಹಾಡುವ
ಕೋಗಿಲೆಯು ಮೈಯ ಮರೆಸಿದೆ
ಪಂಕಜಾ.ಕೆ. ರಾಮಭಟ್. ಮುಡಿಪು
Comments
Post a Comment