. ಸೀತಾ ಪರಿಣಯ
ಭಾಮಿನಿ ಷಟ್ಪದಿ
ಮಕ್ಕಳಿಲ್ಲದ ರಾಜ ದಶರಥ
ತಕ್ಕ ಸಮಯದಿ ಯಾಗ ಮಾಡಲು
ಪಕ್ಕಬಂದಳು ದೇವಿ ಪಾಯಸ ಹಿಡಿದು ನಗುಮುಖದಿ
ನಕ್ಕು ಬಿಡುತಲಿ ಕೊಟ್ಟಳಾಕೆಯು
ಉಕ್ಕಿ ಹರಿಯುವ ಗಡಿಗೆಯೊಂದನು
ಕಕ್ಕುಲಾತಿಯ ತೋರಿ ನುಡಿದಳು ಹಿತದ ಮಾತುಗಳಾ
ಕರದಿ ಹಿಡಿದಿಹ ಪಾತ್ರೆಯಲ್ಲಿಹ
ಸುರರ ಮೆಚ್ಚಿಸಿ ಪಡೆದ ಪಾಯಸ
ಕರೆದು ಕೊಟ್ಟನು ತನ್ನ ಮಡದಿಯರೆಲ್ಲರನು ಬೇಗ
ಹರನ ದಯೆಯಲಿ ಪಡೆದ ಮಕ್ಕಳ
ಮೆರೆಸಿ ತನ್ನಯ ರಾಜ್ಯದೆಲ್ಲೆಡೆ
ಕರೆಸಿ ಕಲಿಸಿದ ಸಕಲ ವಿದ್ಯೆಯ ತನ್ನ ಕಂದರಿಗೆ
ವರುಷ ಕಳೆಯಲು ಬೆಳೆದ ಸುತರನು
ಹರಸಿ ಕಳಿಸಿದ ಋಷಿಯ ಜತೆಯಲಿ
ಭರಧಿ ಕಲಿತರು ಮಕ್ಕಳೆಲ್ಲರು ಸಕಲ ವಿದ್ಯೆಯನು
ಕರದಿ ಹಿಡಿದಿಹ ಬಿಲ್ಲು ಬಾಣವ
ಮುರಿದು ಗೆದ್ದನು ರಾಮ ಸ್ಪರ್ಧೆಯ
ಕರದಿ ಮಾಲೆಯ ಹಿಡಿದ ಸೀತೆಯು ನಗೆಯ ಬೀರಿದಳು
ಕರವ ಹಿಡಿಯುತ ಜನಕ ರಾಜನು
ಕರೆದನೊಲವಲಿ ತನ್ನ ಸುತೆಯನು
ಕರೆಸಿ ದಶರಥ ರಾಜನನು ತಾ ಸಕಲ ಗೌರವದಿ
ಮೆರೆಸಿ ಬಿಡುತಲಿ ತನ್ನ ಬಳಗದಿ
ನರನ ರೂಪದ ಹರಿಯ ಕರದಲಿ
ತರುಣಿ ಕರವನು ಬೆಸೆದು ಕಳಿಸಿದನೊರಸಿ ಕಂಬನಿಯ
ಶ್ರೀಮತಿ.ಪಂಕಜಾ ಕೆ ರಾಮಭಟ್
06 10 2023
Comments
Post a Comment