ಕೇಳು ಮಗುವೆ
(ವಾರ್ಧಕ ಷಟ್ಪದಿ )
ಮೇಲೆ ಬಾನಲ್ಲಿರುವ ಹಕ್ಕಿಗಳ ಸಾಲನ್ನು
ತೋಳನ್ನು ಚಾಚುತ್ತ ಕರೆಯುತ್ತಲಾಡುವನು
ಬಾಳಿನಾ ಗೋಳನ್ನು ತಿಳಿಯದಿಹ ಬಾಲನಿವ
ಸುಮನಸಿನ ಮುದ್ದುಕೃಷ್ಣ
ನಾಳಿನಾ ಚಿಂತೆಯೇ ಕಾಡದಿಹ ತೆರದಲ್ಲಿ
ಪಾಲಕರು ಸಾಕಿಹರು ಮುದ್ದು ಮಾಡುತಲವನ
ಕಾಲವದು ಸರಿಯುತಿರೆ ಕಲಿಯುವನು ವಿದ್ಯೆಗಳ ಸರಸತಿಯ ಮಂದಿರದಲಿ
ಹರೆಯಕ್ಕೆ ಬಂದಾಗ ಸಂಗಾತಿ ಜತೆಯಲ್ಲಿ
ಮರೆಯದೆಯೆ ಹೆತ್ತವರ ಸೇವೆಯನು ಮಾಡುತ್ತ
ಮೆರೆಯುವನು ಜಗದಲ್ಲಿ ತನ್ನತನ ತೋರುತ್ತ ಸಹಿಸುತಲಿ ಕಷ್ಟಗಳನು
ಹಿರಿಯರನು ಗೌರವಿಸಿ ದಿನಗಳನು ಕಳೆಯುತಿರೆ
ಹರಸುವರು ನಮ್ಮನ್ನು ಖುಷಿಯಿಂದ ತಲೆಸವರಿ
ತೆರೆಯುವನು ಬಾಗ್ಯದಾ ಬಾಗಿಲನು ನರಹರಿಯು ಕರುಣಿಸುತ ಸಕಲವನ್ನೂ
ಕಾಲವದು ಸರಿದಾಗ ಮಾಗುವುದು ಜೀವನವು
ಸೋಲನ್ನು ಗೆಲ್ಲುತಲಿ ಮೇಲೇರಿ ನಿಂತಾಗ
ಬಾಳಿನಾ ಸಿಹಿಕಹಿಯ ನೆನಪನ್ನು ಮೆಲುಕಾಡಿ ಸಂತಸವ ಕಾಣುತ್ತಿರು
ಕಾಲನಾ ಕರೆ ಬರುವ ಮೊದಲೊಮ್ಮೆ ಮಾಡುತಿರು
ನಾಳಿನಾ ದಿನಕೆಂದು ಕಟ್ಟಿಡದೆ ಹಣವನ್ನು
ಬಾಳಲ್ಲಿ ನೊಂದಿರುವ ಬಡಜನರಿಗೊಳಿತನ್ನು
ಮಾಡುತ್ತ ಸುಖಿಯಾಗಿರು
ಪಂಕಜಾ. ಕೆ.ರಾಮಭಟ್
Comments
Post a Comment