ಆದಿಪೂಜಿತ ಗಣೇಶ
ಗರಿಕೆಯ ಹುಲ್ಲಲಿ ಹಾಲಿನ ಹನಿಯ
ನಿವೇದಿಸೆ ತಣಿಯುವುದೀ ಹೊಟ್ಟೆ
ವರಗಳ ಕೊಡುವಾ ವಿಘ್ನ ನಿವಾರಕನಿಗೆ
ವಂದಿಸಿ ಕಡುಬನು ಕೊಟ್ಟೆ
ಡೊಳ್ಳಿನ ಹೊಟ್ಟೆಗೆ ಸರ್ಪವ ಸುತ್ತಿ
ಇಲಿಯನ್ನೇರುತ ನೀ ಬಂದೆ
ರಾವಣನ ಸೊಕ್ಕನು ಕ್ಷಣದಲಿ ಮುರಿದು
ಜಗಕೆ ಆನಂದವ ನೀ ತಂದೆ
ಕರದಲಿ ಅಂಕುಶ ಪಾಶವ ಹಿಡಿದು
ಹೊಟ್ಟೆಯ ಕುಣಿಸುತ ಬಂದೆ
ಭಕ್ತರ ಕರೆಯನ್ನಾಲಿಸುತಿದ್ದು
ವರಗಳ ಕೊಡುತಲಿ ನಿಂದೆ
ನಿನ್ನನು ನೋಡಿ ನಕ್ಕವನೆಂದು
ಚಂದ್ರಗೆ ಶಾಪವ ಕೊಟ್ಟೆ
ಇಲಿಯನ್ನೇರುತ ಬರುತಿರೆ ನೀನು
ಬಗೆ ಬಗೆ ತಿಂಡಿಯನಿಟ್ಟೆ
ಮೊರದಗಲದ ಕಿವಿಯಲಿ ಗಾಳಿಯಬೀಸುತ
ಸೊಂಡಿಲನಾಡಿಸಿ ಬರುವೆ
ಗರಿಕೆಯ ಹುಲ್ಲನು ಅರ್ಪಿಸಿ ಬೇಡಲು
ಬೇಡಿದ ವರಗಳ ಕೊಡುವೆ
ಚೌತಿಯ ದಿನದಲಿ ಬರುತಿಹ ನಿನ್ನನು
ಭಕ್ತಿಯಲಿ ಸ್ತುತಿಸುತಲಿರುವೆ
ವಿಘ್ನ ನಿವಾರಿಸಿ ಸಕಲವ ಕೊಡುತಿರೆ
ಮೋದದಿ ನಿನ್ನನು ಭಜಿಸುವೆ
ಶರಣಾಗತರನು ಕಾಯುವೆ ಎಂಬ
ಬಿರುದನು ಪಡೆದಿಹೆ ದೇವಾ
ಕರಗಳ ಮುಗಿದು ಶಿರವನು ಬಾಗುವೆ
ಕಳೆ ನೀ ಎಮ್ಮಯ ನೋವಾ
ಶ್ರೀಮತಿ.ಪಂಕಜಾ.ಕೆ. ರಾಮಭಟ್
Comments
Post a Comment