Skip to main content

Posts

ನೆನಪಿನ ದೋಣಿ ಚಿತ್ರ ಕವನ

ಚಿತ್ರ ಕವನ ಸ್ಪರ್ಧೆಗಾಗಿ ನೆನಪಿನ ದೋಣಿ ಊರ ಮುಂದಿನ   ಬಾವಿಕಟ್ಟೆ ಹೆಂಗಳೆಯರ ಹರಟೆಯ ಕಟ್ಟೆ ನೀರೆಯ  ನಡುವಿನಲ್ಲಿ ಒಂದು ಕೊಡ ನೀರ ಸೆಳೆಯುವ ರಾಟೆಯ ಗಡ ಗಡ ನಿತ್ಯವೂ ಹೆಂಗಳೆಯರ ಕಲರವ ಕೈ ಬಳೆಗಳ ಕಿಂಕಿಣಿ ನಾದದ ತರಂಗ ಮನೆ ಮನೆಯ ಸುಖದುಃಖದ ಕಥೆ ಹಂಚಿ ಸಾಂತ್ವನಿಸುವ ತಾಣವಂತೆ ಸುತ್ತಲೂ ತುಂಬಿದೆ ಕಸಕಡ್ಡಿಗಳ ಲೋಕ ಗತಕಾಲದ ವೈಭವದ ಪ್ರತೀಕ ಇಣಿಕಿ ನೋಡುವವರಿಲ್ಲದೆ ಪಾಳುಬಿದ್ದಿದೆ ಬಾವಿ ಹಿಂದಿನ ವೈಭವವ ಪಳೆಯುಳಿಕೆಯಾಗುತ್ತಿದೆ ಬಾವಿ ಮನೆ ಮನೆಯಲೂ ಕೊಳವೆ ಬಾವಿಯದೇ ಲೋಕ ಗುಂಡಿ ಒತ್ತಿದರೆ ಸುರಿಯುವ ಜಲಧಾರೆಯದೆ ಜಳಕ ನೀರ ಸೆಳೆಯುವ ರಾಟೆಯ ಗಡ ಗಡ ಸದ್ದಿಲ್ಲ ಬಾವಿಕಟ್ಟೆಯಲಿ ಹೆಂಗಳೆಯರ ಕಲರವವಿಲ್ಲ ಬಾವಿಯೊಳಗಿನ  ಕಪ್ಪೆಯಂತೆ ಜೀವನ ಪ್ರತಿಯೊಂದು ಮನೆಗೂ ಭದ್ರಗೇಟಿನ ಆವರಣ ನೆನಪಿನ ದೋಣಿಯಲಿ ತೇಲುತ್ತಿದೆ ಮನ ಬಂದೀತೇ ಇನ್ನೊಮ್ಮೆ ಅಂತಹ ದಿನ ಪಂಕಜಾ.ಕೆ

ಅನ್ನದಾತನ ಭವಣೆ ಕಾವ್ಯಾಂತರಂಗ

ಕಾವ್ಯಾಂತರಂಗ  ಸ್ಪರ್ಧೆಗಾಗಿ ವಿಷಯ ....ಬರಗಾಲದ ಲ್ಲಿ ರೈತನ ಗೋಳು  ಅನ್ನದಾತನ ಬವಣೆ ಭೂಮಿ ಬಿರಿದಿದೆ  ಒಡಲು  ನೊಂದಿದೆ ಜೀವನ ಬಾರವೆನಿಸಿದೆ ಕಣ್ಣು ತುಂಬಿದೆ ಮನಸು ಅಳುತಿದೆ ದೇವ ಕರುಣೆಯು ಬಾರದೆ ಬಾನ ಬಯಲಲಿ ಮುಗಿಲು ತುಂಬಿದೆ ಮಳೆಯ ಸುರಿಸದೆ ಸರಿದಿದೆ  ಬೆಳೆದ ಬೆಳೆಗಳು ನೀರ ಕೊರತೆಗೆ ಬಾಡಿ ಉದುರಿ ಹೋಗಿದೆ ಪಟ್ಟ ಕಷ್ಟಕೆ  ಫಲವು ಇಲ್ಲದೆ  ಬಾಳ ದೋಣಿಯು ಮುಳುಗಿದೆ ಹರಿದ ಬಟ್ಟೆಯು ಹಸಿದ ಹೊಟ್ಟೆಯು ಬರಗಾಲದ ಬವಣೆಯ ತಿಳಿಸಿದೆ ಕಾಲ ಕಾಲಕೆ  ಮಳೆಯು  ಸುರಿಯುತ ಬದುಕ ಬವಣೆಯು ನೀಗಲಿ ಅನ್ನ ಬೆಳೆಯುವ ರೈತನರಮನೆಯಲಿ ಹೊನ್ನ ಕಣಜವು ತುಂಬಲಿ ಪಂಕಜಾ.ಕೆ ಮುಡಿಪು

ಶಿವನೊಲುಮೆ ಇರಲಿ

ಶಿವನೊಲುಮೆಇರಲಿ ಈಶ ನಿನ್ನ ಸ್ಮರಣೆ ಮಾಡಿ ನಿತ್ಯಭಜಿಸುವೆ ಪಾಶ ಹಸ್ತದಿಂದ ಕಾಯೋ ಶಂಭುಶಂಕರ ಬಂಧಿಸುವ ನೂರು ನೋವು ನಿತ್ಯ ಕಾಡಿದೆ ನೋವು ಕಳೆದು ಮನಕೆ ಶಾಂತಿಯನ್ನು ಕರುಣಿಸೋ ನನ್ನ ಹೃದಯದಲ್ಲಿ ನಿನ್ನ ಮೂರ್ತಿ ತುಂಬಿದೆ ನೇಮ ನಿಷ್ಠೆಯಿಂದ ನಿನ್ನ ಭಜನೆ ಮಾಡುವೆ ಕಾಮ ಕ್ರೋದ ಬಿಡಿಸಿ ನನ್ನ ಕಾಯೋ ಶಂಕರ ಅನುದಿನವೂ ಅನುಗ್ರಹಿಸು  ಸೋಮೇಶ್ವರ ಜನನಿ ಜನಕ  ಎಲ್ಲಾ ನೀನೇ ಎನಗೆ ಜಗದೀಶ್ವರ ಬಂಧು ಬಳಗವೆಲ್ಲ ನೀನೇ ಕಾಯೋ ಈಶ್ವರ ಹರುಷದಿಂದ ನಿನ್ನ ನಾಮ ಸ್ಮರಣೆ ಮಾಡುವೆ ಅನುದಿನವೂ ಅನುಗ್ರಹಿಸು ಮಂಜುನಾಥನೇ ಗಂಗೆಯನು ಶಿರದಲ್ಲಿ ಧರಿಸಿರುವ  ಗಂಗಾಧರ ಭಂಗವನು ತಾರದೆಯೇ ಸಲಹೆಮ್ಮನು ನಿನ್ನ ಒಲುಮೆಯಿರಲು ನಮಗೆ ಭಯವುಎಲ್ಲಿದೆ ನಿತ್ಯ  ಕರುಣೆಯಿಂದ ನಮ್ಮ ಕಾಯೋ  ಕರುಣಾಕರ ದುಷ್ಟರನ್ನು ಶಿಕ್ಷಿಸುತ ಶಿಷ್ಟರನ್ನು ಕಾಯುತಿರುವೆ ಜಗದ ತಂದೆ ಪಾರ್ವತಿ ವಲ್ಲಭ ಪರಮೇಶ್ವರ ಗಜಚರ್ಮ ಧರಿಸಿರುವ ಗೌರೀವರ ಕಾಶಿಯಲ್ಲಿ  ನೆಲೆಶಿರುವ ವಿಶ್ವೇಶ್ವರ ನಾಮ ಸ್ಮರಣೆ ಮಾತ್ರದಿಂದ ಕಳೆವೆ ಪಾಪವ ನೇಮದಿಂದ  ಭಜಿಸುತ್ತಿರಲು ಒಲಿವೆ ನೀನು ಸುರೇಶ್ವರ ಅನುದಿನವೂ ಬೇಡುವೆನು ತಂದೆ   ವಿಶ್ವನಾಥ ಕರುಣೆಯಿಂದ ಕಾಯು ಎನ್ನ   ಶಶಿಶೇಖರ ಪಂಕಜಾ .ಕೆ

ಹೃದಯ ರಾಗ ಸಿಗ್ನೇಚರ್ ಲೈನ್

ಸಿಗ್ನೇಚರ್ ಲೈನ್ 41   ಸ್ಪರ್ಧೆಗಾಗಿ ದತ್ತ ಪದ....ಮನದ ವೀಣೆಯು ಬರಿದೆ ಕುಳಿತಿದೆ ಹೃದಯ ರಾಗ ಹೃದಯ ರಾಗವು ತಾಳತಪ್ಪಿದೆ ಮೌನ ಗೀತೆಯು ಮೊಳಗಿದೆ ಮನದ ವೀಣೆಯು ಬರಿದೆ ಕುಳಿತಿದೆ ಶ್ರುತಿಯ ಮೀಟುವವರಿಲ್ಲದೆ ನೋವಿನಲೆಗಳು ತೇಲುತಿರುವುದು ಮನದ  ಮೂಲೆಯಲೆಲ್ಲಿಯೋ ರಾಗವಿಲ್ಲದ ಭಾವವೆಂದೂ  ತಂಪತಾರದು ಮನಸಿಗೆ ಮನದ ಬಾನಲಿ ಬಾವದಲೆಗಳು ತೇಲಿ ಬರುತಿದೆ ನಿತ್ಯವೂ ಒಲವ ಸುರಿಸುವ ಮೃದುಲ ಮಾತಿಗೆ ಮನವು ಕಾದು ಕುಳಿತಿದೆ ರಾಗವಿಲ್ಲದ ಗಾನವೆಂದೂ  ಖುಷಿಯ ಕೊಡದು ಮನಸಿಗೆ ಮುರಿದ ವೀಣೆಯ ಶ್ರುತಿಯ ಮೀಟಿ ಒಲವ ಗಾನವ  ನುಡಿಸೆಯಾ ಪಂಕಜಾ.ಕೆ

ಪ್ರೇಮರಾಗ

ಪ್ರೇಮ ರಾಗ.  (ಭಾವಗೀತೆ) ( ಕಾವ್ಯಕೂಟ ವಾಟ್ಸಪ್ ಬಳಗದಲ್ಲಿ ತೃತೀಯ  ಬಹುಮಾನ ಪಡೆದ ನನ್ನ ಭಾವಗೀತೆ) ಒಲವ ಸೂಸುವ ನಿನ್ನ ಕಣ್ಣ ನೋಟಕೆ ಹೃದಯ ರಾಗವ ಹಾಡಿತು ಮುದದಿ  ಅರಳಿತು ಮನವು ಇಂದು ನಿನ್ನ ಪ್ರೀತಿಯ ಮಾತಿಗೆ ಕಲ್ಲು ಮುಳ್ಳಿನ ದಾರಿ ಕೂಡಾ ಹೂವ ಹಾಸಿಗೆಯಾಯಿತು ಪ್ರೀತಿ ತುಂಬಿದ ನಿನ್ನ ನುಡಿಗಳು ನನ್ನ ಮನವನು ಮೀಟಿತು ನನ್ನ ಹೆಜ್ಜೆಗೆ ತಾಳ ಹಾಕುತ ನವಿಲ ನಾಟ್ಯವ ಮರೆಸಿತು ಬಾಳ ಪಯಣವು ಜತೆಗೆ ಸಾಗಲು ಮನದಿ  ಸಂತಸ ತುಂಬಿತು ನಿನ್ನ ಭರವಸೆಯ  ನೋಟವೊಂದೇ ತನುವು ಅರಳಲು ಸಾಲದೆ ನಿನ್ನ ಎದೆಯಲಿ ಉಸಿರ ಸೇರಿಸಿ ಪ್ರೇಮರಾಗವ ಹಾಡಿದೆ ಮನದ ಗುಡಿಯಲಿ ಬಂದು ನಿಂತು ನನ್ನ ಮನವನು  ಬೆಳಗಿದೆ ಪಂಕಜಾ ಕೆ.

ಭಾವಯನ (ಭಾವಗೀತೆ)

ಭಾವಯಾನ  (ಭಾವಗೀತೆ) ಚುಮು ಚುಮು ಚಳಿಯು ಲಗ್ಗೆಯಿಟ್ಟಿದೆ ಮೈಮನಕೆ ಜಡತೆಯನು ತಂದೊಡ್ಡಿದೆ ಮಾಮರದ ತುಂಬೆಲ್ಲ ಹೂಗಳರಳಿದೆ ಕೋಗಿಲೆಯು ಮಧುರವಾಗಿ ಕುಕಿಲಿಡುತ್ತಿದೆ ಭೂರಮೆಯು ಹಸಿರುಟ್ಟು ತೊನೆದಾಡಿದೆ ದುಂಬಿಗಳು ಮಧುಹೀರುತ ನಲಿದಾಡಿವೆ ನಿನ್ನೊಡನೆ  ಪ್ರಕೃತಿಯಲಿ ನಲಿದಾಡೋ ಆಸೆ ಅನುರಾಗದ ಅಲೆಗಳಲಿ ತೇಲಾಡೋ ಬಯಕೆ ಕಣ್ಣಿನಲ್ಲಿ ನಿನ್ನ ರೂಪ ತುಂಬಿ ನಿಂತಿದೆ ಮನದಲ್ಲಿ ಪ್ರೇಮಗಾನ ಗುಣುಗುಣಿಸಿದೆ ನನ್ನೆದೆಯ ವೀಣೆಯನು ನೀ ಮೀಟಿದೆ ಹೊಸರಾಗ ಹೊಸ  ಬಯಕೆ ಹುಚ್ಚೆದ್ದಿದೆ ಆಸೆಗಳ ದುಂಬಿಗಳು ಮನ ಕೊರೆದಿದೆ ನೂರಾರು ಹೊಸ ಕನಸ ನೀ ಬಿತ್ತಿದೆ ಪಂಕಜಾ.ಕೆ.

ನ್ಯಾನೊ ಕಥೆ ನನಸಾದ ಕನಸು ಕಾವ್ಯಕೂಟ ದಲ್ಲಿ ತೃತೀಯ ಬಹುಮಾನ

ನ್ಯಾನೊ ಕತೆ. ದತ್ತ ಪದ  ಇದೇ ಸರಿಯಾದ ಉಪಾಯ ನನಸಾದ ಕನಸು ಎಂ.ಡಿ. ಯಲ್ಲಿ ಚಿನ್ನದ ಪದಕ ಪಡೆದುಕೊಂಡ ರಮೇಶನಿಗೆ  ಒಂದೇ ಕನಸು, ತಾನು ತನ್ನ ಹಳ್ಳಿಯ ಜನರ ಸೇವೆ ಮಾಡಿ ತನ್ನ ವಿದ್ಯೆ ಸಾರ್ಥಕ ಪಡಿಸಬೇಕು ಎನ್ನುವುದು . ಆದರೆ ಆತನ ತಂದೆ ತಾಯಿಯರಿಗೆ ಮಗ  ದೊಡ್ಡ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಸಾಧ್ಯವಾದರೆ ಹೊರದೇಶಕ್ಕೂ ಹೋಗಲಿ ಎನ್ನುವ ಆಸೆ  .ಏನು ಮಾಡುವುದೆಂದು ತಿಳಿಯದೆ ಚಿಂತೆಯಲ್ಲಿದ್ದ ರಮೇಶ  ಸ್ನೇಹಿತನ ಸಲಹೆಯಂತೆ   ಇದೆ ಸರಿಯಾದ ಉಪಾಯ ಎಂದು  ತನಗೆ ವಿಪರೀತ ಹೊಟ್ಟೆನೋವು ಎಂದು ನಟನೆ ಮಾಡಿದ ತಂದೆ ತಾಯಿ  ಗಾಬರಿಯಾದರು ಮಧ್ಯರಾತ್ರಿಯ ಆ ಹೊತ್ತಿನಲ್ಲಿ ಆ ಹಳ್ಳಿ ಕೊಂಪೆಯಲ್ಲಿ ಯಾವದೇ ಡಾಕ್ಟರ್ ಆಗಲಿ, ವಾಹನವಾಗಲಿ , ಇಲ್ಲದೆ ಇದ್ದುದರಿಂದ ತಂದೆ ತಾಯಿ ಮಗನ ಸಂಕಟ ನೋಡಲಾರದೆ ಕಣ್ಣೀರು ಹಾಕುತ್ತಿದ್ದರು.  ರಮೇಶ ತನ್ನ ಕನಸು ನನಸಾಗುವುದು ತಿಳಿದು ಖುಷಿಯಿಂದ ನಿದ್ದೆ ಹೋದ ಪಂಕಜಾ.ಕೆ