Skip to main content

ಮೋಹನ ಚಿತ್ರಕವನ

ಚಿತ್ರ ಕವನ

     ಮೋಹನ

ಎಲ್ಲಿ ಹೋದೆ ಚೆಲುವ ಕೃಷ್ಣ
ಕಾಯುತಿರುವುದು ಕಾಣದೆ
ನಿನ್ನ ದಾರಿ ಕಾದು ನಾನು
ಸೋತು ಹೋದೆ ತಿಳಿಯದೆ

ನಿನ್ನ ಮುರಳಿಗಾನದಲ್ಲಿ
ನನ್ನ ಸೆಳೆದು ತಂದೆಯ
ಅವಿತು ಈಗ ನೀನು ನನ್ನ 
ಎನಿತು ಕಾಡುತಿರುವಿಯೋ

ಶಲ್ಯೆಯನ್ನು ಎಳೆದು ನೀನು
ತುಂಟತನವ ತೋರಿದೆ
ನಾಚಿಕೆಯು ತುಂಬಿ 
ನನ್ನ ಕೆನ್ನೆ ಕೆಂಪೇರಿದೆ

ಬಯಕೆ ಬಿರಿದು ಎದೆಯ ತುಂಬಿ
ತನುವು ನಿನ್ನ ಸೇರ ಬಯಸಿದೆ
ಕಣ್ಣು ತುಂಬಾ ನಿನ್ನ ರೂಪ
ತುಂಬಿ ನಿಂತು ಕಾಡಿದೆ

ಹುಡುಗಾಟವಾಡಿ ನನ್ನ
ಏಕೆ  ಹೀಗೆ  ಕಾಡುವೆ
ಬೇಗ ಬಾರೋ ಕಾದು ಕಾದು
ತನುವು ಶಕ್ತಿ ಕುಂದಿದೆ

ಮುಖದ ನಗುವು ಕಣ್ಣ ಹೊಳಪು
ಮಾಸದಿರಲಿ ಪ್ರಿಯನೇ
ಕೆನ್ನೆ ತುಂಬಾ ಕೆಂಪು ಬಣ್ಣ
ಹೊಸ ಕಾಂತಿ ತಂದಿದೆ

ನಿನ್ನ ನೆನಪು ಮನವ  ತುಂಬಿ
ನಿತ್ಯ ಕಾಡುತಿರುವುದು
ಕೋಗಿಲೆಯ ಉಲಿತದಲ್ಲೂ
ನಿನ್ನ ಮುರಳಿಗಾನವೇ ಕೇಳಿದೆ

ಚೈತ್ರಮಾಸ  ಬಂದು ಈಗ
ಮನವ ಕೆಣಕುತಿರುವುದು
ನಿನ್ನ  ಬಿಸಿ ಅಪ್ಪುಗೆಯಲಿ
ಕರಗಬೇಕು ಎನಿಸಿದೆ

ಬಾರೋ ಬೇಗ ಮುರಳಿ ಲೋಲ
ಮನವ ಕದ್ದ ಮೋಹನ
ಕಾಯುತಿರುವ  ಕಷ್ಟವನ್ನು
ನೀನು ತಿಳಿಯಲಾರೆಯಾ
ಪಂಕಜಾ.ಕೆ.

Comments