ನನ್ನಪ್ಪ
ಬೆಳಗಿನ ಜಾವವೇ ಬೇಗನೆ ಎದ್ದು
ಯೋಗಾಸನವನು ಮಾಡುವನು
ಹಟ್ಟಿಯ ದನಗಳ ಮೈಯನು ತಿಕ್ಕುತ
ಹಾಲನು ತಾನು ಕರೆಯುವನು
ದೇವರ ಪೂಜೆಯ ಮಾಡುತ
ದಿನವೂ
ಭಕ್ತಿಯಲಿ ದೇವರ ಬೇಡುವನು
ಓದಲು ಬರೆಯಲು ಕಲಿಸಿದ ಅಪ್ಪ
ಶಿಕ್ಷಕನಾಗಿಯೂ ಹೆಸರನು ಪಡೆದಿಹನು
ಹದಿಮೂರು ಮಕ್ಕಳ ಪಿತ ತಾನಾದರು
ನಗುತಲಿ ಸಂಸಾರ ರಥವನು ಎಳೆಯುವನು
ಮಕ್ಕಳ ಮನದಲಿ ಅಕ್ಷರ ಬೀಜವ
ಬಿತ್ತುತ ತಾನೂ ನಲಿಯುವನು
ಮಕ್ಕಳ ಎಲ್ಲರ ದಡವನು ಸೇರಿಸಿ.
ತೃಪ್ತಿಯ ತಾನು ಕಂಡಿಹನು
ಬಾಳಲಿ ಬರುವ ಕಷ್ಟಗಳನ್ನು
ಎದುರಿಸುವ ಛಲವನು ತುಂಬಿಹನು
ಅಮ್ಮನ ಜತೆಯಲಿ ಪ್ರೀತಿಯಲಿರುತ
ಚಂದದಿ ಸಂಸಾರ ಮಾಡಿಹನು
ಹೋಮಿಯೋಪತಿಯಲಿ ಯೂ ಸಿದ್ಧಹಸ್ತರು
ಎನ್ನುವ ಕೀರ್ತಿಯ ಪಡೆದಿಹನು
ಬಡವರಿಗೆಲ್ಲ ಉಚಿತವಾಗಿ ಮದ್ದನು
ಕೊಡುತ ಬಡವರ ಬಂಧು ಎನಿಸಿಹನು
ಅಜ್ಜನು ಕಟ್ಟಿದ ಶಾಲೆಯ ನಡೆಸುತ
ಶಾಲೆಯ ಏಳಿಗೆಗೆ ದುಡಿದಿಹನು
ನೋವುಗಳೆಲ್ಲವ ಮನದಲಿ ನುಂಗಿ
ಛಲದಲಿ ಜೀವನ ನಡೆಸಿಹನು
ಕಷ್ಟವ ಗಣಿಸದೆ ನಿಷ್ಠೆಯ ತೋರುತ
ಬೆಳೆಸಿದ ನಮ್ಮನು ನನ್ನಪ್ಪ
ಅಪ್ಪನ ದಿನದಲಿ ಮಾತ್ರವೇ ನೆನೆಯದೆ
ನಿತ್ಯವೂ ನೆನೆಯುವೆ ಬದುಕಲು ಕಲಿಸಿದ ಅಪ್ಪನನು
ಪಂಕಜಾ.ಕೆ.ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment