ಕ ದಿಂದ ಳ ವರೆಗೆ ವ್ಯಂಜನಾಕ್ಷರ ಬಳಸಿ ಪ್ರೇಮ ಸಂಭಾಷಣೆ
ಪ್ರೇಮಕಾವ್ಯ
ಕ ಕಂಡ ಕ್ಷಣವೇ ಸೋತೆ ನಾ ನಿನ್ನ ಮುದ್ದು ಮುಖಕೆ ನಲ್ಲೆ
ಖ ಖೈದಿ ಯಾದೆನು ನಿನ್ನ ಆ ತುಂಟ ಕಣ್ಣೋಟಕೆ ನಲ್ಲ
ಗ ಗಮನವೆಲ್ಲಾ ನಿನ್ನೆಡೆಯೇ ಸೆಳೆದುಬಿಟ್ಟೆ ಓ ಚೆಲುವೆ
ಘ. ಘಂಟೆಗಳು ಕ್ಷಣಗಳಾಗುತ್ತಿದೆ ನೀ ನನ್ನೊಡನಿದ್ದರೆ ಚೆಲುವ
ಙ ವಿಜ್ಞಾಪನೆ ಸಲ್ಲಿಸೋಣ ನಮ್ಮ ಮನೆದೇವರಿಗೆ ನಾವಿಂದುಕೂಡಿ
ಚ. ಚಂದ್ರನಂತಿರುವ ನಿನ್ನ ಮುಖಾರವಿಂದಕೆ ಸೋತೆ ನಲ್ಲೆ
ಛ ಛಲ ತುಂಬಿದ ಆ ಕಣ್ಣ ನೋಟದ ಸೊಬಗು ಸೆಳೆಯಿತು ನಲ್ಲ
ಜ. ಜಯಿಸಿದೆ ನೀ ನನ್ನ ಕಠೋರ ಹೃದಯವ ನಲ್ಲೆ
ಝ ಝರಿಯಂತೆ ಹರಿಯಿತು ನಿನ್ನ ಒಲವು ನನ್ನೆಡೆಗೆ ನಲ್ಲ
ಞ ಯಜ್ಞ ಕುಂಡದೆದುರಲಿ ಹೋಮಾಗ್ನಿಯಲಿ ನಾವಿಬ್ಬರು ಒಂದಾಗೋಣ
ಟ. ಟಕ ಟಕನೆಂದು ನಡೆದಾಡುತ್ತ ಬರುವ ನಿನಗಾಗಿ ಕಾಯುವೆ
ಠ. ಠಕ್ಕನಂತೆ ಏಕೆ ಕದ್ದು ನೋಡುವೆ ನೀ ಇಂದು ನನ್ನ ನಲ್ಲ
ಡ. ಡವ ಡವ ಎನ್ನುತ್ತಿದೆ ನಿನ್ನ ಹೃದಯ ನಾ ಬಲ್ಲೆ ಅದನು ನಲ್ಲೆ
ಢ ಢಕ್ಕೆಯಂತೆ ಬಾರಿಸುತ್ತಿದೆ ನನ್ನೆದೆಯ ಮಿಡಿತ ನಿನಗಾಗಿ ನಲ್ಲ
ಣ. ಜಾಣತನದಲಿ ನಾವಿಬ್ಬರು ಸಂಸಾರ ಸಾಗಿಸೋಣ
ತ ತನುಮನವೆಲ್ಲಾ ನೀನೇ ತುಂಬಿರುವೆಯಲ್ಲಾ ನಲ್ಲ
ಥ ಥಕ ಥಕ ನೆಂದು ಕುಣಿಯುತ್ತಿದೆ ನನ್ನೀ ಹೃದಯ ನಲ್ಲೆ
ದ ದಯಮಾಡಿ ಹೀಗೆ ಕಣ್ಣಲ್ಲಿ ನನ್ನ ಕಾಡಬೇಡ ಓ ಚೆಲುವ
ಧ ಧನ ಕನಕ ಯಾವಾದರಲ್ಲೂ ನನಗೆ ಬಯಕೆಯಿಲ್ಲ ಚೆಲುವೆ
ನ ನಂಬು ನನ್ನನು ಓ ನನ್ನ ಮನವ ಕದ್ದ ಚೆಲು ಚಕೋರಿ
ಪ ಪರಿ ಪರಿಯಲಿ ಬೇಡಿದರೂ ಕರಗದೆ ನಿನ್ನೀ ಹೃದಯ
ಫ. ಫಲಾಪೇಕ್ಷೆಯಿಲ್ಲದೆ ನಿನಗಾಗಿ ನಾನೋಡಿ ಬಂದೆ ನಲ್ಲೆ
ಬ ಬಡಿದಿದೆ ನನ್ನೆದೆಯ ಮಿಡಿತ ನಿನಗಾಗಿ ಅನುದಿನವೂ ನಲ್ಲ
ಮ ಮನಸು ಬೇಡವೆಂದರೂ ಬಿಡದೆ ನಿನ್ನೆಡೆಗೆ ವಾಲಿದೆ
ಯ.ಯಕ್ಷ ಯಕ್ಷಿಣಿಯರಂತೆ ವಿಹರಿಸೋಣ ಬಾನಲ್ಲಿ ನಲ್ಲ
ರ ರವಿಚಂದ್ರರಿರುವ ತನಕ ಒಂದಾಗಿರೋಣ ನಲ್ಲೆ
ಲ ಲಕ್ಷಣವಾಗಿ ಕಾಣುತಿರುವೆ ಈ ಸೀರೆಯಲಿ ನೀನಿಂದು ನಲ್ಲೆ
ವ ವಧುವರರಾಗಿ ಹಸೆಮಣೆಯ ಏರೋಣವೇ ಹೇಳು ನಲ್ಲ
ಶ ಶರಧಿ ಯಂತೆ ನಿತ್ಯ ಹರಿಯುತಿರಲಿ ನಮ್ಮಿಬ್ಬರ ಈ ಪ್ರೇಮ
ಷ ಷರತ್ತುಗಳಿಲ್ಲದೆ ಅನುದಿನವೂ ಖುಷಿಯಲ್ಲಿ ಬಾಳೋಣ ನಲ್ಲೆ
ಸ ಸಹನೆ ಬಾಳಲಿ ನಮ್ಮಿಬ್ಬರ ಉಸಿರಾಗಿರಲಿ ನಲ್ಲ
ಹ ಹರಸಿ ಹಾರೈಸಲು ಬಂಧು ಬಾಂದವರು ಬರುವರು ನಲ್ಲೆ
ಳ ಬಾಳ ಪಯಣವು ಹೀಗೆ ನಗು ನಗುತ ಸಾಗುತಿರಲಿ ನಲ್ಲ
ಪಂಕಜಾ.ಕೆ.ಮುಡಿಪು.
Comments
Post a Comment