ಓ ಭಾರತೀಯ (ದೇಶಭಕ್ತಿ ಗೀತೆ)
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ
ಹಬ್ಬಿ ನಿಂತಿದೆ ನಮ್ಮ ದೇಶ ಭಾರತ
ಧಾಳಿಕೋರರ ತಂತ್ರ ಮುರಿಯುತ
ತಲೆ ಎತ್ತಿ ನಿಂತಿದೆ ನಮ್ಮ ದೇಶ ಭಾರತ
ಕ್ಷಾತ್ರ ತೇಜವು ತುಂಬಿ ತುಳುಕುವ
ವೀರ ರಿಂದ ತುಂಬಿದ ಭಾರತ
ತಾಯಿ ಭಾರತಿಗಾಗಿ ಜೀವನ
ತೆತ್ತು ಬಿಡುವರು ಕ್ಷಣದಲಿ
ವೈರಿ ರುಂಡವ ಚೆಂಡನಾಡುತ
ಗಡಿಯ ಕಾಯುವರು ಯೋಧರು
ಭಾರತಿಯ ಸೆರಗ ಸೆಳೆಯಲು
ಬಿಡದ ವೀರ ಧೀರರು
ಕನಸು ಮನಸಲಿ ತುಂಬಿ ನಿಲ್ಲಲಿ
ದೇಶಾಭಿಮಾನವು ನಮ್ಮಲಿ
ತನು ಮನವು ಮುಡಿಪಾಗಿರಲಿ
ಭಾರತದ ಉನ್ನತಿಯಲಿ
ಜನನಿಯ ಜಯ ಮಂತ್ರವೇ
ನಮ್ಮ ಉಸಿರಾಗಲಿ
ಆತ್ಮನಿರ್ಭರ ಭಾರತವೇ
ನಮ್ಮ ಗುರಿಯಾಗಲಿ
ವಿಶ್ವದೆಲ್ಲೆಡೆ ಹರಡಿ ಹಬ್ಬಲಿ
ಭಾರತಾಂಬೆಯ ಕೀರ್ತಿಯು
ಸ್ವಾತಂತ್ರ್ಯದ ಕಹಳೆ
ಜಗತ್ತಿನೆಲ್ಲೆಡೆ ಮೊಳಗಲಿ
ನಾಡು ನುಡಿ ನಮ್ಮದೆನ್ನುವ
ಭಾವತುಂಬಿ ತುಳುಕಲಿ
ಐಕ್ಯಮಂತ್ರವು ನಮ್ಮ ಉಸಿರಲಿ
ಬೆರೆತು ಹೋಗಲಿ ನಿತ್ಯವೂ
ಸ್ನೇಹ ದುಂದುಭಿ ನಿತ್ಯ ಮೊಳಗಲಿ
ಜಾತಿ ಭೇದವು ತೊಲಗಲಿ
ಭಾರತೀಯರು ನಾವು ಒಂದು
ಎಂಬ ಭಾವವು ತುಂಬಲಿ
ಪಂಕಜಾ.ಕೆ ಮುಡಿಪು
Comments
Post a Comment