ಇನಿಯ ಸುರಿಸಿದ ಮುತ್ತು
ಬಾನು ತುಂಬಿದ ಮುಗಿಲ ಕಂಡು
ಆಶೆ ನಿರಾಶೆಯ ತೊಟ್ಟಿಲಲ್ಲಿ ತೂಗಿ
ವಿರಹದುರಿಯಲಿ ತನುವು ಕಾದು
ನರಳುತ್ತಿದ್ದಾಕ್ಷಣ
ಮನದಿ ತುಂಬಿದ ವಿರಹವ ಕಳೆದು
ಒಲವ ತನಿರಸವನು ಉಣಿಸುತ
ವರುಣ ಬಂದನು ಭರದಲಿ
ಇಳೆಯ ಕಾತರವ ತಣಿಸುತ
ಒಲವ ತನಿರಸವ ಸವಿ ಸವಿದು
ಇಳೆಯು ಕುಣಿ ಕುಣಿದು ನರ್ತಿಸುತ
ಬೀಗಿ ಬಾಗಿದ ಕ್ಷಣದಲಿ
ಬಳುಕಿ ನಿಂತಿತು ತರುಲತೆಗಳು
ಒಡಲಲ್ಲಿ ಅಡಗಿದ್ದ ಬೀಜಗಳು ತಲೆ ಎತ್ತಿ
ಭೂತಾಯಿ ಒಡಲಿನಿಂದ ಮೇಲೆದ್ದು
ಮೈಮನದಲಿ ಉಲ್ಲಾಸವ ತುಂಬುತ್ತಾ
ತಣಿಸಿತು ಇಳೆಯ ಬೇಗೆಯನು
ಇನಿಯ ಸುರಿಸಿದ ಮುತ್ತು ಹನಿಗಳು
ಭೂದೇವಿಯ ಮುಕುಟ ಮಣಿಯಾಗಿ
ಬಾಡಿ ಬಸವಳಿದ ಒಡಲ ತಣಿಸಿ
ಜೀವಕೋಟಿಗಳಿಗೆ ತಂದಿತು ಹರ್ಷದುಸಿರನು
ಪಂಕಜಾ.ಕೆ.
Comments
Post a Comment