43 ಹಸಿರೇ. ...ಉಸಿರು
ಮುಂಗಾರು ಮಳೆ ಪ್ರಾರಂಭವಾಯಿತೆಂದರೆ ಮನೆಯ ಸುತ್ತು ಮುತ್ತು ಗಿಡಗಳನ್ನು ನೆಟ್ಟು ಬೆಳೆಸುವುದು ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಕೈತೋಟ ಮಾಡುವುದು ಸುಲಭವಲ್ಲ .ಅದಕ್ಕೆ ಶ್ರದ್ಧೆ ಶ್ರಮ ಅಸಕ್ತಿಹಾಗೂ ಸಮಯ ಬೇಕು ಆಸಕ್ತಿ ಇದ್ದವರಿಗೆ ಕೈತೋಟದಲ್ಲಿ ಕೆಲಸಮಾಡುತ್ತಿದ್ದರೆ ಸಮಯ ಸರಿದುದೇ ತಿಳಿಯುವುದಿಲ್ಲ. ಹಿಂದಿನ ವರ್ಷ ಜತನದಿಂದ ಕಾದಿಟ್ಟ ತರಕಾರಿ ಬೀಜಗಳನ್ನು ಹಾಕಿ ಅದು ಇರುವೆಗಳ ಪಾಲಾಗದಂತೆ ಜಾಗ್ರತೆವಹಿಸಿ ಉತ್ತಮವಾಗಿ ಬೆಳೆದು ಫಲ ಸಿಗುವಂತೆ ಮಾಡುವುದು ಸುಲಭದ ಕೆಲಸವಲ್ಲ.
ಸ್ಥಳಾವಕಾಶವಿದ್ದರೆ ನಮ್ಮ ಮನೆಯ ಹಿತ್ತಲಿನಲ್ಲಿ ಹಲವಾರು ಹೂಗಿಡಗಳನ್ನು , ಔಷಧೀಯ ಗಿಡಗಳನ್ನು, ತರಕಾರಿ ಹಣ್ಣಿನ ಗಿಡಗಳನ್ನೂ ಬೆಳೆಸಬೇಕು . ಇದರಿಂದ ಮನೆಗೆ ಬೇಕಾದ ತರಕಾರಿಯನ್ನು ಮಾರ್ಕೆಟ್ ನಿಂದ ತರುವ ಶ್ರಮಮತ್ತು ಹಣದ ಉಳಿತಾಯವಾಗುತ್ತದೆ,ಅಲ್ಲದೆ ಸಾವಯವ ತರಕಾರಿ ಸಿಗುತ್ತದೆ .ಮನೆಯಲ್ಲೇ ಬೆಳೆಸಿದ ಹಸಿರು ಸೊಪ್ಪು ತರಕಾರಿಗಳು ರಾಸಾಯನಿಕ ಮುಕ್ತವಾಗಿದ್ದು ಆರೋಗ್ಯವರ್ಧಕವೂ ಆಗಿರುತ್ತದೆ
ಹೂವು ತರಕಾರಿಗಳನ್ನು ಮನೆಯಂಗಳದಲ್ಲಿ ಬೆಳೆಸುವುದರಿಂದ ಮನೆಗೆ ಬೇಕಾದ ಹೂವು ತರಕಾರಿಗಳನ್ನು ಕೊಂಡು ತರಬೇಕಾಗಿಲ್ಲ .ಮಳೆಗಾಲದಲ್ಲಿ ಅವುಗಳ ಆರೈಕೆ, ಬೇಸಿಗೆಯಲ್ಲಿ ನೀರುಣಿಸುವ ಕೆಲಸ, ಇತ್ಯಾದಿ ಮಾಡುವುದರಿಂದ ಶರೀರಕ್ಕೆ ಬೇಕಾದ ವ್ಯಾಯಾಮವು ಸಿಕ್ಕಿ ಶರೀರ ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ. ಮನೆಯ ಸುತ್ತುಮುತ್ತ ಸುಂದರ ಕೈತೋಟವಿದ್ದರೆ ಆಹ್ಲಾದಕರ ಶುದ್ಧ ಗಾಳಿಯು ಸುತ್ತಲೂ ತುಂಬುವುದು. ಕೈತೋಟದ ಹಸಿರು, ಬಗೆ ಬಗೆ ಹೂಗಳ ಸೌಂದರ್ಯ, ನೋಡುವುದೇ ಕಣ್ಣಿಗೆ ಒಂದು ಹಬ್ಬವಿದ್ದಂತೆ. ಹೂಗಳ ಮಧುವನ್ನು ಹೀರಲು ಬರುವ ಬಣ್ಣ ಬಣ್ಣದ ಚಿಟ್ಟೆಗಳ ನರ್ತನ, ದುಂಬಿಗಳ ಝೇಂಕಾರ, ಚಿಕ್ಕ ಚಿಕ್ಕ ಹಕ್ಕಿಗಳು ಹೂವಿಂದ ಹೂವಿಗೆ ಹಾರುವ ಸೊಬಗು ನೋಡುತ್ತಾ ಇದ್ದರೆ ಎಂತಹ ಅರಸಿಕನಾದರೂ ರಸಿಕನಾಗಿ ಕವಿಯಾಗಬಲ್ಲ
ನಮ್ಮ ಮನೆಯ ಕೈತೋಟದಲ್ಲಿ ಮಲ್ಲಿಗೆ , ಸೇವಂತಿಗೆ, ಸುಗಂಧರಾಜ, ಮುರುಗ ಧವನ, ಗುಲಾಬಿ ಅಶೋಕ ಇತ್ಯಾದಿ ಪರಿಮಳ ಭರಿತ ಹೂವಿನ ಗಿಡಗಳು ಅಲ್ಲದೆ ಅಲಂಕಾರಿಕ ಸಸ್ಯಗಳೂ ತಾವರೆ ನೈದಿಲೆ ಇತ್ಯಾದಿ ನೀರಿನಲ್ಲಿ ಅರಳುವ ಹೂಗಳು ಇತ್ಯಾದಿಗಳನ್ನು ಬೆಳೆಸಿದರೆ ತಮ್ಮ ಸೌಂದರ್ಯದಿಂದ ಅವು ನೋಡುಗರ ಕಣ್ಣನ್ನು ಸೆಳೆಯುತ್ತದೆ.
ಹೂಗಳು ಮಾತ್ರವಲ್ಲದೆ ಬಾಳೆ ,ಮಾವು, ಚಿಕ್ಕು ,ಪೇರಳೆ, ಹಲಸು, ಅನನಾಸು, ಇತ್ಯಾದಿ ಹಣ್ಣಿನ ಮರಗಳನ್ನು ನೆಟ್ಟು ವೇಳೆಸಿದರ ಅವುಗಳು ಗಾಳಿಗೆ ತಲೆದೂಗಿ ತಮ್ಮ ಇರುವಿಕೆಯನ್ನು ತಿಳಿಯಪಡಿಸುತ್ತಾ ನಮ್ಮ ಆಯಾಸವನ್ನು ಪರಿಹರಿಸುತ್ತದೆ . ಇವುಗಳಿಂದ ಬರುವ ತಂಪಾದ ಗಾಳಿಯು ಬೇಸಿಗೆಯ ಬಿಸಿಲಿನ ಧಗೆಯನ್ನು ಕಡಿಮೆ ಮಾಡುತ್ತದೆ .ಎಲ್ಲಕ್ಕಿಂತ ಹೆಚ್ಚಾಗಿ ಶುದ್ಧ ಗಾಳಿಯು ಸಿಕ್ಕಿ ಆರೋಗ್ಯ ವೃದ್ಧಿಯಾಗುತ್ತದೆ.
ಇಷ್ಟು ಮಾತ್ರವಲ್ಲದೆ ಔಷಧೀಯ ಸಸ್ಯಗಳಾದ ತುಳಸಿ, ಗರಿಕೆ ಒಂದೆಲಗ ಶುಂಠಿ ,ಸಾಂಬ್ರಾಣಿ, ಬಸಳೆ, ತೊಂಡೆ ,ಬೆಂಡೆ, ಬದನೆ, ಅಲತಂಡೆ, ಮುಳ್ಳುಸೌತೆ, ಸೌತೆ, ಇತ್ಯಾದಿ ಸೊಪ್ಪು ತರಕಾರಿಗಳನ್ನು ಬೆಳೆಯುವುದರಿಂದ ಅವುಗಳು ತಮ್ಮ ನಿತ್ಯ ಹರಿದ್ವರ್ಣದ ಬಣ್ಣದಿಂದ ನಮ್ಮನ್ನು ಆಕರ್ಷಿಸುತ್ತದೆ.
ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಂಗಳದಲ್ಲಿ ಮನೆಗೆ ಬೇಕಾದ ಹೂವು ತರಕಾರಿಗಳನ್ನು ಸಾಧ್ಯವಾದಷ್ಟು ಬೆಳೆಸಬೇಕು ಜಾಗದ ಅಭಾವ ಇದ್ದವರು ಮನೆಯ ಟೆರ್ರಾಸ್ ನಲ್ಲಾದರು ಒಂದಷ್ಟು ಹಸಿರನ್ನು ಬೆಳೆಸಿ ಉತ್ತಮ ಗಾಳಿ ಶುದ್ಧ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಇಂದಿನ ಕಾಂಕ್ರೀಟ್ ಕಾಡಿನ ದಿನಗಳಲ್ಲಿ ಇದು ಅತ್ಯಂತ ಅಗತ್ಯವೂ ಆಗಿದೆ . ಆಗತಾನೆ ಕೊಯ್ದು ತಂದ ಹಸಿರು ತರಕಾರಿಯ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಶುದ್ಧ ಗಾಳಿಯಲ್ಲಿ ನಡೆದಾಡುವುದರಿಂದ ಸಾಂಕ್ರಾಮಿಕ ರೋಗದಿಂದ, ಕೊರೊನಾದಂತ ಮಹಾಮಾರಿಯಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು ಹಸಿರೆ ಉಸಿರು ಎನ್ನುವುದನ್ನು ತಿಳಿದು ಇಂದೇ ಗಿಡನೆಟ್ಟು ಹಸಿರು ಬೆಳೆಸಿ ಉಳಿಸಲು ಪ್ರಯತ್ನಿಸಿ
ಪಂಕಜಾ ಕೆ.ಮುಡಿಪು
Comments
Post a Comment