Skip to main content

ಸುಂದರ ಪ್ರಕೃತಿ

ಸುಂದರ ಪ್ರಕೃತಿ   
 
ಹಸಿರಿನ   ಮರಗಳು ಚಂದದಿ ನಲಿಯುತ
ರಸಿಕರ ಕಂಗಳ ಸೆಳೆಯುತಿವೆ
ಅರಳಿದ ಹೂಗಳು ಗಂಧವ  ಸೂಸುತ
ದುಂಬಿಗಳನು ತಾ ಕರೆಯುತಿವೆ

ಹರಿಯುವ ನದಿಗಳ ಮಂಜುಳ ಗಾನವು
ಮೈಮನವನ್ನು ಮರೆಸುತಿವೆ
ಗುಡ್ಡ  ಬೆಟ್ಟಗಳು ತುಂಬಿದ ಕಾನನ
ಪ್ರಕೃತಿಯ ಸೊಬಗನು ತೋರುತಿವೆ

ಬೀಸುವ ಗಾಳಿಯು ತಂಪನು ತರುತಲಿ
ಮನಸಿನ ಬೇಸರ ಕಳೆಯುತಿದೆ
ಬಾನಲಿ ಸರಿಯುವ ಬೆಳ್ಳಿಯ ಮೋಡವು
ಮನದಲಿ ಕನಸನು ಬಿತ್ತುತಿದೆ

ಮೋಡದ ಎಡೆಯಲಿ ಮಿನುಗುವ ಚಂದಿರ
ಪ್ರೇಮಿಗಳ ಮನವನು ತಣಿಸುವನು
ಮೂಡಣದಲ್ಲಿ ಮೂಡುವ ರವಿಯು 
ಬೆಳಕನು ಜಗದೆಡೆ ಹರಿಸುವನು

ಹಸಿರಿನ ಮಡಿಲಲಿ ಉಸಿರದು ತುಂಬಿದೆ
ಕಸಿದಿದೆ ರಸಿಕರ ಮನವನು
ಬಿಸಿಲಿನ ತಾಪವ ತಣಿಸುತಲಿರುವುದು
ಬೀಸುತ ತಂಪಿನ ಗಾಳಿಯನು

 ಶ್ರೀಮತಿ .ಪಂಕಜಾ.ಕೆ. ರಾಮಭಟ್

Comments