ಬ್ರಹ್ಮಚಾರಿಣಿಗೆ ನಮಿಸುವೆ
ಭೋಗ ಷಟ್ಪದಿ.
ಬಿದಿಗೆ ದಿನದಿ ಬುವಿಗೆ ಬರುವ
ಹದುಳ ನೇತ್ರೆ ಗೌರಿ ದೇವಿ
ಪದಕೆ ನಮಿಸಿ ಬೇಡಿಕೊಳುವೆ ಬ್ರಹ್ಮ ಚಾರಿಣಿ
ಎದೆಯ ಮೂಲೆಯಿದ್ದ ಹರನ
ಕದವ ತೆರೆದು ಬಕುತಿಯಿಂದ
ಭರದಿ ತಪವ ಮಾಡುತೊಲಿಸಿ ಕೊಂಡ ಮಾನಿನಿ
ಬಿಳಿಯ ವಸನವುಟ್ಟುಕೊಂಡು
ಬಲದ ಕರದಿ ಜಪದ ಮಾಲೆ
ಜಲದ ಪಾತ್ರೆ ಹಿಡಿದುಕೊಂಡು ತಪವ ಮಾಡಿದೆ
ಮಲಿನಗೊಂಡ ತನುವ ತೊಳೆದು
ಲಲಿತೆ ನಿನ್ನ ನುತಿಸುತಿರುವೆ
ಕಳೆಯು ನಮ್ಮ ಕಷ್ಟಗಳನು ಮಾತೆ ಪಾರ್ವತಿ
ನವದಿನಗಳು ರಾತ್ರಿಯಲ್ಲಿ
ಹವನ ಹೋಮ ಮಾಡುತಿರುವೆ
ಬುವಿಗೆ ಬಂದು ಹರಸು ನಮ್ಮನೆಲ್ಲ ಕರುಣದಿ
ಭವದ ಬಂಧವನ್ನು ಕಳೆದು
ಕವಿದ ತಮವ ಸರಿಸಿ ಬಿಡುತ
ಭವಿತವೆಲ್ಲ ಸುಖದಿ ಬಾಳಲೆಮ್ಮ ಹರಸುನೀ
ಪಂಕಜಾ.ಕೆ.ರಾಮಭಟ್
Comments
Post a Comment