ಹೂವಿನ ಬಾಳು
ಹಸಿರೆಲೆಗಳ ನಡುವೆ
ಅರಳಿ ನಗುತಿಹ ಚೆಲುವೆ
ಬಿರಿದರಳಿದೊಂದೇ ದಿನ
ಮನಸೆಳೆಯುವೆ ಎನ್ನ
ಮದುಹೀರ ಬರುತಿಹ
ದುಂಬಿಗಳಿಗಾಸರೆಯಾಗಿ
ನಗುತ ಹಂಚುತ ಒಲುಮೆ
ನಿಂತಿರುವೆ ಸೌಂದರ್ಯ ರಾಣಿಯಾಗಿ
ಮನದಿ ತುಂಬಿದ ರಂಗು
ಭಾವನೆಗಳ ಗುಂಗು
ಉಲ್ಲಾಸ ಉತ್ಸಾಹ ತುಂಬಿ
ಮನಕೆ ಮುದ ತುಂಬಿ
ಒಂದು ದಿನದ ಬಾಳುವೆಯಲಿ
ನಗುನಗುತ್ತಾ ಮನವ ಸೆಳೆದೆ
ದೇವಪೂಜೆಯಲಿ ಪಾವನಳಾದೆ
ಹೆಣ್ಣಿನ ಮುಡಿಯಲಂಕಾರಕಾದೆ
ಮೊಗ್ಗರಳಿ ಹೂವಾಗಿ
ನಗು ನಗುತ ಬಾಳಿ
ಎಲ್ಲರ ಮನಕೆ ಮುದತಂದೆ
ಸಾರ್ಥಕವಾಯಿತು ಬಾಳು
ಪಂಕಜಾ.ಕೆ. ಮುಡಿಪು ಕುರ್ನಾಡು
Comments
Post a Comment