Skip to main content

Posts

Showing posts from September, 2020

ಪ್ರಕೃತಿ ಸೊಬಗು ಅಂತರರಾಜ್ಯ ಘಟಕ ದಲ್ಲಿ ಮೆಚ್ಚುಗೆ

ಗುರುಕುಲಾ ಕಲಾ ಪ್ರತಿಷ್ಠಾನ ಅಂತರರಾಜ್ಯ ಘಟಕ ವಾರಕ್ಕೊಬದು ಸ್ಪರ್ಧೆ 20.09.2020 ಸ್ವರಚಿತ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕವನ ವಿಷಯ..ಪ್ರಕೃತಿ    ಶೀರ್ಷಿಕೆ.. ಪ್ರಕೃತಿ ಸೊಬಗು     ಬಾನ ಬಯಲಲಿ ಮುಗಿಲು ಕಾಣುತ ಮನದಿ ತುಂಬಿತು ಮೋದವು ಸುರಿದ ಮಳೆಯಲಿ ಕರಗಿ ಹೋಯಿತು ಇಳೆಯ ಮೇಲಿನ ಕೊಳೆಗಳು ಮುಗಿಲಿನೆತ್ತರ ಹಾರುತಿರುವ ಹಕ್ಕಿಗಳ ಕಲರವದಲಿ ಮನವು ನಲಿಯಿತು ನವಿಲಿನಂದದಿ ಕನಸು ಮನಸಲಿ ತುಂಬುತಾ ಏನಿದೇನಿದು ಪ್ರಕೃತಿ ವೈಭವ ಕಣ್ಣು ಮನವನು ತುಂಬಿದೆ ಹಸಿರ ಸಿರಿಯಲಿ ಮೈ ಮರೆಯುತ ನಲಿಯು ಎದೆಯಲಿ ತುಂಬಿದೆ ಹಚ್ಚ ಹಸಿರಿನ ಸೆರಗು ಹಾಸಿದೆ ಪ್ರಕೃತಿ ಮುದದಲಿ ನಲಿಯುತ ಚಿಗುರು ಹೂಗಳು ತುಂಬಿ ತುಳುಕುತ ಕಣ್ಣು ಮನವನು ಸೆಳೆಯಿತು ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ .ಶ್ರೀ ಗಣೇಶ ಕೃಪಾ.ಮುಡಿಪು. ಅಂಚೆ.ಕುರ್ನಾಡು.ದ.ಕ.574153

ಸಾವಿತ್ರಿ ಬಾಯಿ ಪುಲೆ ಮಾಂತ್ರಿಕ ಮಹಿಳೆ

ಕರಾಳ  ರಾತ್ರಿ  ಸಮರ್ಪಣೆ..ಸಾವಿತ್ರಿ ಬಾಯಿ ಪುಲೆ ಶೀರ್ಷಿಕೆ..ಮಾಂತ್ರಿಕ ಮಹಿಳೆ ಅಕ್ಷರ ಕ್ರಾಂತಿಯ ಮಾಂತ್ರಿಕ ಮಹಿಳೆ ಹೆಣ್ಣು ಮಕ್ಕಳ ಶಿಕ್ಷಣಕೆ ಒತ್ತು ಕೊಟ್ಟಾಕೆ ಕರಾಳ ರಾತ್ರಿಯ ಇತಿಹಾಸವ ಬದಲಿಸಿದಾಕೆ ಭಾರತದ ಮೊದಲ ಮಹಿಳಾ ಶಿಕ್ಷಕಿಯೀಕೆ ಬಾಲ್ಯ ವಿವಾಹದಿ ಜೊತೆಯಾದ ಜೊತೆಗಾರ ಕಲಿಸಿದರು ಅಕ್ಷರವನು ಸಾವಿತ್ರಿಗೆ ಶಿಕ್ಷಕರ ತರಬೇತಿ ಪಡೆಯುತಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತೆರೆದರು ಶಾಲೆ ಅನಿಷ್ಟ ಪದ್ಧತಿಗಳ ನಿರ್ಮೂಲನಕೆ  ಟೊಂಕ ಕಟ್ಟುತ ದುಡಿದಾಕೆ ದಲಿತರ ಏಳಿಗೆ ಬಯಸುತ ಸಮಾನತೆಯ ತತ್ವವ ಸಾರಿದಾಕೆ ಪಂಕಜಾ.ಕೆ. ಮುಡಿಪು

ದಾರಿ ಕಾಣದಾಗಿದೆ ಕಾವ್ಯ ಕೂಟ ದಲ್ಲಿ ದ್ವಿತೀಯ ಸ್ಥಾನ

ಕಾವ್ಯ ಕೂಟ ದಲ್ಲಿ ದ್ವಿತೀಯ ಸ್ಥಾನ ದಾರಿ ಕಾಣದಾಗಿದೆ   ಕೊರೊನಾ ಮಾಹಾಮಾರಿಯ ಧಾಳಿಗೆ ಜಗವೇ ತಲ್ಲಣಿಸಿದೆ ಕಾಣದ ಭೀತಿಯಲಿ ಮೈ ಮನವು ನರಳುತಿದೆ ಎಷ್ಟು ದಿನ ಮುಖ ಮುಚ್ಚಿ ತಿರುಗುವುದೋ ಕಾಣೆ ಬದುಕು ಅನಿಶ್ಚಿತತೆಯಲಿ ನೊಂದು ನರಳುತಿದೆ ದಾರಿ ಕಾಣದೆ ಬಳಲಿ ಬೆಂಡಾಗಿ ಹೆಬ್ಬುಲಿಯಂತೆ ಮೆರೆದಾಡಿದ  ಮಾನವ ಸಾವಿನ ಭೀತಿಯಲಿ ಆಗಿರುವನು ಈಗ ಹೈರಾಣ ಪ್ರಕೃತಿ ಮುನಿದು ಸೇಡು ತೀರಿಸುತ್ತಿರಬಹುದೇ? ಪ್ರಕೃತಿಯ ವಿಕೃತಿ ಮಾಡಿ ದ ಫಲವಾಗಿರಬಹುದೇ? ಪ್ರಕೃತಿಯ ಜತೆ ಸಂಧಾನ ಮಾಡಲು ಬರಲಾರನೇ ಶ್ರೀ ಹರಿ ನಂಬಿದವರಿಗೆ ಇಂಬನೀಯುವ ಮಹಾಮಹಿಮ   ಶ್ರೀಕೃಷ್ಣ ಪಂಕಜಾ.ಕೆ.  ಮುಡಿಪು

ಗುರುಕುಲಾ ಕಲಾ ಪ್ರತಿಷ್ಠಾನ ಕೊಡಗು ಘಟಕದ ವಾರದ ಸ್ಪರ್ಧೆಯಲ್ಲಿ ಉತ್ತಮವೆಂದು ಪರಿಗಣಿಸಿದ ಕವನ ನಂಬ ಕವನ

ಗುರುಕುಲ ಕಲಾ ಪ್ರತಿಷ್ಠಾನ ಜಿಲ್ಲಾ ಘಟಕ ಕೊಡಗು ವಾರಕ್ಕೊಂದು ಸ್ಪರ್ಧೆಯಲ್ಲಿ ಉತ್ತಮವೆಂದು ಪರಿಗಣಿಸಿದ ನನ್ನ ಸ್ವರಚಿತ ಕವನ ವಿಷಯ ..ದಿನಚರಿ ಶೀರ್ಷಿಕೆ ..ನಮ್ಮ ರೈತ ಕೋಳಿಯು ಕೂಗುವ ಮೊದಲೇ ಎದ್ದು  ದಿನಚರಿಯಲ್ಲಿ ತೊಡಗುವನು ನೇಗಿಲ ಹಿಡಿದು ಗದ್ದೆಯ ಉಳುತ ಹಸಿರಿನ ಹಾಸನು ಹಾಸುವನು ಹಗಲಿರುಳೆನ್ನದೆ ಗದ್ದೆಯ ಕೆಸರಲಿ ದುಡಿಯುತಲಿರುವನು ರೈತ ದೇಶದ ಜನತೆಯ ಹಸಿವನುನೀಗಲು ದಿನವೂ ಶ್ರಮವನು ಪಡುತಿಹನು ಮಳೆಯನು ಕಾಯುತ ಭರದಲಿ ನಿಲ್ಲುತ ಭೂತಾಯಿಯ ಸೇವೆಯ  ಮಾಡುವನು ಉಳುಮೆಯ ಮಾಡುತ ದಿನಗಳ ಕಳೆಯುತ ಹೊನ್ನಿನ ಬೆಳೆಯನು ತೆಗೆಯುವನು ಹಸಿರೇ  ಉಸಿರು ಎನ್ನುವ ತತ್ವವ ತಿಳಿಯುತ ಹಸಿರನು  ಬೆಳೆಯಲು ಶ್ರಮಿಸುವನು ಕಾಯಕಯೋಗಿಯು  ನಮ್ಮಯ ರೈತನು ದೇಶದ ಏಳ್ಗೆಗೆ ದುಡಿಯುವನು   ಪಂಕಜಾ.ಕೆ. ಮುಡಿಪು .

ಕಾವ್ಯ ಕೂಟ ದಲ್ಲಿ ಪ್ರಥಮ ಸ್ಥಾನ ಪಡೆದ ಗಜಲ್

ಗಜಲ್   ನೀಜತೆಯಲಿರಲು ಮನಸ್ಸು  ನವಿಲಾಗಿದೆ ಸಖ ನಿನ್ನೊಡನಾಟವು ಅನುದಿನವೂ ಬೇಕಾಗಿದೆ ಸಖ ಕಷ್ಟ ನಷ್ಟಗಳೇನು ಬಂದರೂ ಹೆದರಲಾರೆ ನಾನು ನಿನ್ನೊಲವಿನಾಸರೆಯಿರಲು ಭಯವೆಲ್ಲಿದೆ ಸಖ ಗಾಳಿಗೊಡ್ಡಿದ ಸೊಡರಿನಂತಾಗದಿರಲಿ ಜೀವನ ಇಬ್ಬರ ಮಧ್ಯೆ ಎದ್ದಿರುವ ಗೋಡೆ ಕೆಡವಿದೆ ಸಖ ಪಕ್ಷಿಗಳೆಲ್ಲಾ ಎಷ್ಟು  ಚೆನ್ನಾಗಿ  ಕೂಡಿ ಬಾಳುತಿವೆ ಅವರಂತೆ  ಖುಷಿಯಿಂದ ಇರಬೇಕಾಗಿದೆ ಸಖ ನಿನಗಾಗಿ ಹುಟ್ಟಿಬೆಳೆದ ಮನೆಬಿಟ್ಟು ಬಂದಿರುವೆ ಪಂಕಜಾಕ್ಷಿಯ ಬಾಳು ನಿನ್ನಿಂದ ಬೆಳಗಿದೆ ಸಖ ಪಂಕಜಾ.ಕೆ. ಮುಡಿಪು

ಕವಿ ಸಾಹಿತಿ ಚಿತ್ರಕ್ಕೊಂದು ಕಥೆ ಮದುರ ಮೈತ್ರಿ

ಮಧುರ ಮೈತ್ರಿ ಮೋಹನ ನ ಮನಸ್ಸು ತಾನು ಮದುರಾಳನ್ನು ಭೇಟಿಯಾದ ಸುಂದರ ಕ್ಷಣವನ್ನು ನೆನೆಯುತ್ತಾ ಆನಂದದಿಂದ ತುಂಬಿತ್ತು . ಎಂತಹ ಸೌಂದರ್ಯದ ಖನಿ ಆಕೆ ಮೊದಲ ನೋಟಕ್ಕೆ ತಾನು ಅವಳಿಗೆ ಸೋತು ಹೋಗಿದ್ದೆನಲ್ಲ ,ಪೇಟೆಯಲ್ಲಿ ಬೆಳೆದ ಹೆಣ್ಣಾದರೂ ಆಕೆಯದು ಅದೆಂತ ಮೋಹಕ ಕಾಂತಿ ,ನಯ,ವಿನಯ, ಹಳ್ಳಿಯ ತೋಟದ ಮನೆಯ ಹುಡುಗನೆನ್ನುವ ಕಾರಣಕ್ಕೆ ತಂದೆ ತಾಯಿಯರ ಜತೆ ಇರಲು ಒಪ್ಪದೆ ಅದೇ ನೆಪ ಮಾಡಿಕೊಂಡು ತನ್ನನ್ನು ನಿರಾಕರಿಸಿದ ಹೆಣ್ಣುಗಳೆಷ್ಟೋ .ತಾನೂ ಅಷ್ಟೇ ತನ್ನನ್ನು ಮಾತ್ರವಲ್ಲದೆ ತನ್ನ ತಂದೆ ತಾಯಿಯನ್ನು ಪ್ರೀತಿಸುವ ಹುಡುಗಿ ಸಿಗುವ ತನಕ ಮದುವೆಯೇ ಆಗುವುದಿಲ್ಲ ಎಂದು ನಿರ್ಧರಿಸಿದ್ದೆನಲ್ಲ .ಆದರೆ ಅದೊಂದು ದಿನ ಗೆಳೆಯನ ಮದುವೆಗೆ ಎಂದು ಹೋದ ತಾನು ಮದುಮಗಳ ಸ್ನೇಹಿತೆಯ ಮೋಹಪಾಶದಲ್ಲಿ  ಹೇಗೆ ಬಿದ್ದುಬಿಟ್ಟೆ ಎನ್ನುವುದೇ ತಿಳಿಯದಾಯ್ತು. ಗೆಳೆಯನಿಗೆ ಇದರ ಸುಳಿವು  ಸಿಕ್ಕಿ ಆತ ನಮ್ಮಿಬ್ಬರನ್ನು ಅಲ್ಲೇ ಹತ್ತಿರದ ಪಾರ್ಕಿಗೆ ಕರೆದೊಯ್ದು ಪರಿಚಯಿಸಿದ್ದ. ಆಗ ಆಕೆ ತನ್ನೆಡೆಗೆ ಬೀರಿದ ನೋಟ ನಂತರ ಅವಳು ಹೇಳಿದ ಆ ಮಾತು ತನ್ನನ್ನು ಸಂಪೂರ್ಣವಾಗಿ ಅವಳನ್ನು ಒಪ್ಪಿಕೊಳ್ಳುವಂತೆ ಮಾಡಿತ್ತು.ಅದರಂತೆ ಗೆಳೆಯನ ಮಧ್ಯಸ್ಥಿಕೆಯಲ್ಲಿ ನಮ್ಮಿಬ್ಬರ ಮದುವೆ ವಿಜೃಂಭಣೆಯಿಂದ ನೆರವೇರಿತ್ತು.                 ಅದೀಗ ತಾನೇ ನವ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳಾದ ಮಧುರ ಮತ್ತು ಮೋಹನ್ ವಧೂಗೃಹ ಪ್ರವೇಶದ ಕಾರ್ಯಕ್ರಮಗಳೆಲ್ಲಾ ಮುಗಿದ ಮೇಲೆ  ಏಕಾಂತವಾಡಲು ಬಯಸಿದರು. ಮೋಹನ್ ಅವಳನ್

ಗುರುಕುಲ ಮೈಸೂರು ಘಟಕ ಉತ್ತಮ ವೆಂದು ಆಯ್ಕೆಯಾದ ಹಾಯ್ಕುಗಳು

ಗುರುಕುಲ  ಮೈಸೂರು  ಘಟಕ ವಾರಕ್ಕೊಂದು ಸ್ಪರ್ಧೆಗಾಗಿ ಹಾಯ್ಕುಗಳು 1..ಮಾರಣಹೋಮ ಸ್ವಾರ್ಥ ಸಾಧನೆ ಮನುಕುಲವೆಲ್ಲವೂ ಮಾರಣಹೋಮ 2 ಹೂವು ಅರಳುವ ಹೂ ನಗುವುದು ಕಂಡಾಗ ಬೆಳದಿಂಗಳು 3.ಹಸಿರು ಉಸಿರು ಭೂಮಿ ಒಡಲು ಹಸಿರಾಗಿರಬೇಕು ಉಸಿರಾಡಲು 4.ಅಹಂ ನಾನೆಂಬ ಅಹಂ ಬಿಡಲಾಗದಿದ್ದರೆ ಬಾಳು ನಿಸ್ಸಾರ 5.ತಾಯ್ನಾಡು ನನ್ನತಾಯ್ನಾಡು ಭಾರತದೇಶವೆಂದು  ಆಭಿಮಾನವು    ಪಂಕಜಾ.ಕೆ.ಮುಡಿಪು  ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಶ್ರೀ ಗಣೇಶ ಕೃಪಾ ಮುಡಿಪು.ಅಂಚೆ. ಕುರ್ನಾಡು.ದ.ಕ.574153

ಸಾಹಿತ್ಯ ಮತ್ತು ಬದುಕು ಲೇಖನ ಗುರುಕುಲ ಉಡುಪಿ ಘಟಕ ದಲ್ಲಿ ಅತ್ಯುತ್ತಮ

ಗುರುಕುಲ ಉಡುಪಿ ಜಿಲ್ಲಾ ಘಟಕ ಸ್ಪರ್ಧೆಗಾಗಿ ವಿಷಯ ..ಸಾಹಿತ್ಯ ಮತ್ತು ಬದುಕು ಸಾಹಿತ್ಯ ಮತ್ತು ಬದುಕು ಒಂದಕ್ಕೊಂದು ಪೂರಕವಾಗಿದೆ. ಸಾಹಿತ್ಯ ಬದುಕಿನ ಅವಿಭಾಜ್ಯ ಅಂಗವೆಂದರೆ ತಪ್ಪಲ್ಲ. ಬದುಕು ಮತ್ತು ಬರಹ ಒಂದೇ ಆಗಿದ್ದರೆ ಮಾತ್ರ ಆ ಸಾಹಿತ್ಯ ಸತ್ವಯುತವಾಗಿರುತ್ತದೆ. ಹೇಳುವುದೇ ಒಂದು ಮಾಡುವುದೇ ಒಂದು ಎಂದಾಗಿದ್ದಾಗ ಅಂತಹ ಸಾಹಿತ್ಯ ಜನಮನವನ್ನು ಸೆಳೆಯದು. ಬದುಕು ಮತ್ತು ಸಾಹಿತ್ಯ ಒಂದೇ ತೆರನಾಗಿ ಇರುವ ಸಾಹಿತಿಯ ಬರಹಕ್ಕೆ ಅದರದೇ ಆದ  ಸತ್ವವಿರುತ್ತದೆ. ನಮ್ಮ ಜೀವನದಲ್ಲಿ ಕಂಡಂತಹ ಅನುಭವ ನೋವು ನಿರಾಶೆ ಸುಖ ದುಃಖ ಗಳು ಸಾಹಿತ್ಯವಾಗಿ  ಹೊರ ಹೊಮ್ಮಿ ನಮ್ಮನ್ನು ನೋಯಿಸಿದವರಿಗೆ ಅದು ತಟ್ಟುವಂತಿರಬೇಕು..                   ಮಾನವೀಯ ಮೌಲ್ಯಗಳನ್ನು ಸಾಹಿತ್ಯದಲ್ಲಿ ಸೇರಿಸುವುದರಿಂದ  ಸಾಹಿತ್ಯವು ಸತ್ವಭರಿತವಾಗಿ ಮೌಲ್ಯಯುತ ಬರಹವಾಗುತ್ತದೆ. ಸಾಹಿತ್ಯವು ಸಮಾಜಕ್ಕೆ ಕನ್ನಡಿ ಇದ್ದಂತೆ. ಸಮಾಜದ ವ್ಯಕ್ತಿಗಳ ನಡೆ ನುಡಿ  ಇತ್ಯಾದಿಗಳನ್ನು ತಿದ್ದುವ ಕೆಲಸ ಉತ್ತಮ ಸಾಹಿತ್ಯದಿಂದ ಸಾಧ್ಯ . ಸಾಹಿತ್ಯದಲ್ಲಿ ಇರುವುದು ಮನುಷ್ಯನ ಜೀವನದ ಕಥೆ. ಓದುವ ಬರೆಯುವ ಮೂಲಕ ಬದುಕು ರೂಪಿಸಿಕೊಳ್ಳಬಹುದು. ಸಾಹಿತ್ಯ ಬದುಕಿನ ಬಾಗವಾಗಿದ್ದಂತೆ ಬದುಕೂ ಸಾಹಿತ್ಯದ ಒಂದು ಬಾಗವೇ ಆಗಿದೆ.  ವರಕವಿ ಕುಬೆಂಪು, ರಾಮಕೃಷ್ಣ ಪರಮಹಂಸ, ವಿವೇಕಾನಂದ ಇವರೆಲ್ಲರ  ಸಾಹಿತ್ಯವು  ಬದುಕಿಗೆ ಹತ್ತಿರವಾಗಿದೆ  ದಾಸರ ಪದಗಳು ,ಶರಣರ ವಚನಗಳು,  ತ್ರಿಪದಿಗಳು, ಮಂಕು ತಿಮ್ಮನ ಕಗ್ಗ ಇವೆಲ

ಅತ್ಯುತ್ತಮವೆಂದು ಆಯ್ಕೆ ಗುರುಕುಲ ಶಿವಮೊಗ್ಗ ಘಟಕ ಜೋಗ ಜಲಪಾತ

ಗುರುಕುಲ ಶಿವಮೊಗ್ಗ ಘಟಕದ ಬಾನುವಾರದ ಸ್ಪರ್ಧೆಗಾಗಿ  ಚಿತ್ರಕ್ಕೊಂದು  ಕವನ ಜೋಗ ಜಲಪಾತ ಮನಸೂರೆಗೊಳ್ಳುತ್ತಿದೆ ನಿನ್ನ ಲಾಸ್ಯ ರುದ್ರರಮಣೀಯ ಸೌಂದರ್ಯ ಬಾಷ್ಯ ಪ್ರವಾಸಿಗರ ಮನತಣಿಸುತಿದೆ  ವೈಭೋಗ ನೋಡಲು ಎರಡು ಕಣ್ಣು ಸಾಲದಾಗಿದೆ ಈಗ ರಾಜ  ನಡಿಗೆಯಲಿ  ಸರಿದು ಬಂದು ಬಳುಕುವ ಬಳ್ಳಿಯಂತೆ ಹರಿಯುತ ನಿಂದು ಧುಮ್ಮಿಕ್ಕಿ ಆರ್ಭಟಿಸುತಿದೆ ಕಣ್ಣು ಸೆಳೆದು ರಸಿಕರ ಮನದಲಿ ಬೆರಗನು ತಂದು ಬಾಣದಂತೆ ಚಿಮ್ಮಿ ನೊರೆಯುಕ್ಕಿಸುವ ಪರಿ ಹಿಡಿದಿಡಲಾಗದು ನಿನ್ನ ಈ ಸೊಬಗಿನ ವೈಖರಿ ಜಲಧಾರೆಯ ಸೌಂದರ್ಯ ಕ್ಕೆ ಎಣೆಯುಂಟೆ ಜೋಗ ಜಲಪಾತದ ಸೊಬಗ ಕಾಣದವರುಂಟೆ ಮಳೆಗಾಲದಲ್ಲಿ ಅಬ್ಬರಿಸಿ ಹರಿಯುವುದು ಹೃದಯ ನಡುಗಿಸುವ ಶಬ್ದ ಮಾಡುವುದು ಕಡಿದಾದ ಕಣಿವೆಯ ಪರಿಸರದ ಸುಂದರ ದೃಶ್ಯ ಬೇರೆಯೇ ಲೋಕಕ್ಕೆ ಕರೆದೊಯ್ಯುವುದು ಸತ್ಯ ಕನ್ನಡ ನಾಡಿನ ಹೆಮ್ಮೆಯ ಈ  ತಾಣ ವಿಶ್ವವಿಖ್ಯಾತ ಸುಂದರ ಸ್ಥಳ ಕಾಣ ಮಲೆನಾಡಿನ ಸೌಂದರ್ಯಕ್ಕೆ ಮುಕುಟಮಣಿ ಜೋಗ ಜಲಪಾತವೆಂಬ  ಈ ನಮ್ಮ ಕಣ್ಮಣಿ ಪಶ್ಚಿಮಘಟ್ಟದ ರುದ್ರ ರಮಣೀಯ ನೋಟ ರಸಿಕರಿಗೆ ಪ್ರಕೃತಿ ಸಿರಿಯ  ವೈಭವದ ಊಟ ರಾಜಗಾಂಭೀರ್ಯದಲಿ ಹರಿಯುವ ರೀತಿ ನೋಡುತಲಿದ್ದರೆ  ತಲೆದೋರುವುದು ಭೀತಿ ಬಳ್ಳಿಯಂತೆ ಬಳುಕುತ್ತಾ ಹರಿದಾಡುವ ಚೆಲುವು ನವಿಲಿನ ನಾಟ್ಯದ ತೆರದಂತೆ  ಮೈಮನಕೆ ನಲಿವು ರಾಕೆಟ್ನಂತೆ ಧುಮುಕುವ ನೀರಧಾರೆಯಸೊಬಗು ಮನಮೋಹಕ ದೃಶ್ಯ ಕಾಣುವ ಕಣ್ಣಿಗೆ ಬೆರಗು ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಶ್ರೀ ಗಣೇಶ ಕೃಪಾ . ಮುಡಿಪು

ಕಲ್ಪನೆಯ ಕುದುರೆ ನವಪರ್ವದಲ್ಲಿ ಉತ್ತಮ

ನವಪರ್ವ ಬಳಗದ ಸ್ಪರ್ಧೆಗಾಗಿ ಕಲ್ಪನೆಯ ಕುದುರೆ ಕಲ್ಪನೆಯ ಕುದುರೆಯಿದು ಓಡುತಿದೆ ವೇಗದಲಿ ಸರ ಸರನೆ  ಸರಿಯುತ ಮನದಾಳದಿ ಮನದಾಳದ ಭಾವವದು ಕಲ್ಪನೆಯಲಿ ಮಿಂಚಾಗಿ ತನುವನು ತಬ್ಬುತ ಮೆರೆದಾಡಿದೆ ದೂರದಾ ಬಯಲಲಿ  ಕುಣಿಯುತಿರುವ ನವಿಲೊಂದು ಕಲ್ಪನೆಗಳ ಗರಿಗೆದರಿ  ಹರಡಿಸುತಿದೆ ಕಲ್ಪನಾ ಲೋಕದಲಿ  ಮುಳುಗಿರಲು ಮನದಲಿ  ಸಂತಸದ ಅಲೆಗಳು ಹುಚ್ಚೆದ್ದಿದೆ  ಕನಸಿನ ಲೋಕದಲಿ   ತೇಲಾಡುತಿರಲು  ವಾಸ್ತವದ ಅರಿವಿಲ್ಲದ ಚೆಲುಕನಸದು   ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್

ಕಾವ್ಯಕೂಟ ದಲ್ಲಿ.ಪ್ರಥಮ ಸ್ಥಾನ ಪಡೆದ ಜಡೆ ಕವನ ನಾಟಕರಂಗ

ಕಾವ್ಯಕೂಟ ಸ್ಪರ್ಧೆಗಾಗಿ ಜಡೆಕವನ ನಾಟಕರಂಗ ಜೀವನವೊಂದು  ನಾಟಕ ನಾಟಕವಾಡುತಲೇ  ಬದುಕು ಬದುಕು ಬವಣೆಗೆ  ನಾ ಸೋತೆ ಸೋತು ಸುಮ್ಮನೆ ಕೂರಬೇಡ ಕೂರಬೇಡವೆಂದರೂ  ಕೇಳದು ಮನ ಮನದ ಬಯಕೆಯ ತಣಿಸಲು ಬೇಕು ನೀನು ನೀನು ಜತೆಯಲ್ಲಿದ್ದರೆ ಬಾಳು ಸುಂದರ ಸುಂದರ ಪರಿಸರದಲ್ಲಿ ಮೈಮರೆತೆ ನಲ್ಲ ನಲ್ಲ ನಿನ್ನ ಒಡನಾಟದಲ್ಲಿ ನಾನು ಬಲು ಸುಖಿ ಸುಖೀ ಜೀವನವು ತಂದಿದೆ ಮನಕೆ  ಗೆಲುವು ಗೆಲುವು ತುಂಬಿದ ಜಗ ಸುಂದರ ನೀನಿದ್ದರೆ ನೀನಿದ್ದರೆ  ಬೇರೇನೂ ಬೇಕು ಜಗದಲಿ ಜಗದಲಿ ಬಾಳಲು ಪ್ರೀತಿ ವಿಶ್ವಾಸ ಬೇಕು ಬೇಕು ಬೇಕೆನ್ನುವ ಕಾತರ ಮೈತುಂಬಿದೆ ಮೈತುಂಬಿದ ಬಯಕೆಗೆ ತನು ಸೋತಿದೆ ಸೋತರೂ  ನಡೆಯಬೇಕು ಜೀವನ ಪಂಕಜಾ.ಕೆ. ಮುಡಿಪು