Skip to main content

Posts

Showing posts from August, 2019

ನಿಶಾ ದೇವಿ

ನಿಶಾ ದೇವಿ ಬಾನಲಿ ಚೆಲು ಬಣ್ಣವ ಕಲಸುತ ರವಿ ತಾನಿಶೆಯೊಡನಾಡಲು ತೆರಳಿದನು ಆಗಸದಂಚಲಿ ಹಬ್ಬಿದ ಬಣ್ಣದ ಓಕುಳಿ ಎಲ್ಲೆಡೆ ತುಂಬಿತುಚೆಲುವಿನ ಚಿತ್ತಾರದ ಟಿಕಳಿ ಬೀಸುವ ತಂಗಾಳಿಯ ತಂಪು ಗಿಡಮರಗಳ ತೊನೆದಾಟದ ಸೊಂಪು ರಾತ್ರಿಹೂಗಳು ಬಿರಿದರಳುವ ಕಂಪು ಮೈಮನವೆಲ್ಲಾ ಹಬ್ಬುವ ಆನಂದದ ಹುರುಪು ನೋಡದೋ ಬಂದನು ಮೋಡದ ಮರೆಯಲಿ ಇಣುಕುತ ಬೆಳ್ಳಿಯ ತಟ್ಟೆಯ ತೆರದಿ ಭೂಮಂಡಲಕೆಲ್ಲಾ ಹಾಲಿನ ಬೆಳಕನು ಚೆಲ್ಲಿ ತಾರೆಗಳನೋಡನಾಡುತ ಚಂದಿರ ಬಂದ ಧರೆಯಲಿ  ಹರಡಿತು ಕಂಪಿನ ತಂಪು ಮೈಮನ ಮರೆಸುವ ಸೊಬಗಿನ ಇಂಪು ಪಂಕಜಾ.ಕೆ.

ಅಮೃತ ಧಾರೆ ಭಾವಗೀತೆ

ಅಮೃತಧಾರೆ ಅಂಬರದ ತುಂಬೆಲ್ಲಾ ಕರಿ ಮೋಡಗಳ ದಂಡು ನೀಲಾಗಸದಿ  ಹರಡಿಹುದು ಕಪ್ಪನೆಯ  ಹಿಂಡು llಪll ವಸುಂದರೆಯ ಮೈಯೆಲ್ಲಾ ಕಣ್ಣಾಗಿದೆl ವರುಣನೊಲವಿನ ನಿರೀಕ್ಷೆಯಲಿ ಬೆಂಡಾಗಿದೆl ತನು ಕಾದು ಮೈಯೆಲ್ಲಾ ಕೆಂಪಾಗಿದೆl ಇಳೆಯಿಂದು ಮೈ ಮರೆತು ಇನಿಯನರಸಿದೆ ll ಇನಿಯಳ ಒಲವಿನ ಕರೆಗೆ ಮನಸೋತನೇ?l ಬಂದಂದು ಬಿಗಿದಪ್ಪಿ ಸಂತೈಸಿದನೇ?l ವರುಣನೊಲವಿನ ಧಾರೆ ಹರಿದು ತಂಪಾಗಿದೆ l ಹಸಿರು ಹುಲ್ಲುಗಳು ತಾ ಬಿರಿದು ತಲೆಯೆತ್ತಿದೆ ll ಎಲ್ಲೆಲ್ಲೂ ಹಸಿರ ಸಿರಿ ಹೂ ಹಾಸಿದೆ l ಅಂಬರ ಚುಂಬಿತ ಗಿರಿಗಳ ಸಾಲು ಮೇಲೆದ್ದಿದೆ l ಅಮೃತ ಧಾರೆಯಲಿ  ಮಿಂದು ಮೈಮರೆತಿದೆ l ಜುಳು ಜುಳು ಹರಿಯುವ ನದಿಯಿಂದು ಹುಚ್ಚೆದ್ದು ಕುಣಿದಾಡಿದೆ ll ವರುಣನಾಗಮನದಿಂದ ಸಂತೃಪ್ತಿl ಸಂಭ್ರಮದಿ ಮುಳುಗೆದ್ದು ಮೀಯುತಿದೆ l ಎಲ್ಲೆಲ್ಲೂ ತುಂಬಿರುವ ಪ್ರಕೃತಿ ಸಿರಿl ಅನಂದದಾ  ಅಮಲಿನಲಿ ನಲಿಯುತಿದೆ ll ಪ್ರಕೃತಿಯ ಮಡಿಲಲ್ಲಿ ನಲಿದಾಗ ಸುಕೃತಿ l ಕಳೆಯು ತಿ ದೆ  ಮೈಮನದ  ವಿಕೃತಿl ಜೀವನೋತ್ಸಾಹವ ಹೆಚ್ಚಿಸುತl ತುಂಬುತಿದೆ ಮೈಮನಕೆ ಉಲ್ಲಾಸ ಹಾಸ ll ಪಂಕಜಾ.ಕೆ.

ಸುಂದರ ಕ್ಷಣ

     ಸುಂದರ ಕ್ಷಣ ಮಳೆಗಾಲವು ಮೆಲ್ಲ ಮೆಲ್ಲನೆ ಬಂದಿತು ಹೊತ್ತಿ ಉರಿದ ಧರೆಗೆ ತಂಪನು ತಂದಿತು ಮಳೆಯ ಸ್ಪರ್ಶವು ಇಳೆಗೆ ತಂದಿತು ತಂಪು ತುಂಬಿದ ಹರ್ಷದೊಲವಿನ ತೇರನು ಹಸಿರು ಹುಲ್ಲು ತಲೆಯನೆತ್ತಿ ಬಿಂಕದಿಂದ ಬೀಗಿತು ಧರೆಯ ತುಂಬಾ ಹಸಿರುಹೂಗಳ ಹೊದಿಕೆಯನ್ನು ಹೊದೆಸಿತು ಮೋಡಗಳ ಸರಮಾಲೆಯಲಿ ನವೋಲ್ಲಾಸದ ಹಾಸ ಬಾನಲಿ ಗುಡುಗುಡಿಸಿ ಸುರಿಸಿದಾ ಮಳೆ ಹನಿಯ ಶ್ವಾಸ ಮುತ್ತು ಪೋಣಿಸಿದಂತಾ ಒಲವಿನ ಗಣಿ ಮೇಘಗಳು ಸುರಿಸುವ ಒಂದೊಂದು ಹನಿ ಸುಂದರ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ ಮನಸು ಹಸಿರು ಕಾನನದಲ್ಲಿ   ನಲಿದಾಡುವ  ಕನಸು ಪಂಕಜಾ.ಕೆ.

ಪ್ರಕೃತಿಯ ಬಂಧ

ಪ್ರಕೃತಿಯ ಬಂಧ ಬಾನಲಿ ತೇಲಾಡುತಿವೆ  ಮೋಡಗಳ ಹಿಂಡುl ಆಗಸದಿ ಹಾರಾಡುತಿವೆ ಹಕ್ಕಿಗಳ ದಂಡುll ರವಿ ತಾ ಇಳೆಗೆ ಬೆಳಕ ಸುರಿಸಲು  ಬಂದl ಭೂತಾಯಿ ಹೊದ್ದಿರುವ ಹಸಿರು ಸೀರೆಯ ಅಂದll ಹರಡಿತದೋ ಎಲ್ಲೆಲ್ಲೂ ಚೆಲುವ ಬಣ್ಣಗಳ ರಂಗುl ಕವಿಮನದಲಿ ತುಂಬುತಿದೆ ಯಾವುದೋ ಗುಂಗುll ಭೂರಮೆಯ ಚೆಲುವು ಕಣ್ಣು ಕುಕ್ಕುವ ಚಂದl ಕಣ್ಣು ಮನಕೆಲ್ಲಾ ತುಂಬುತಿದೆ ಆನಂದll ಪ್ರಕೃತಿ ಸಿರಿಯ ಬಂಧನದಲ್ಲಿರಲು ಮನವುl ಕಳೆದುಹೋಗುತಿದೆ ಮೈ ಮನದ ಅರಿವುll ಉಳಿಸಿ ಬೆಳೆಸಬೇಕು ಭೂತಾಯಿ ಚೆಲುವುl ಪ್ರಕೃತಿಯೊಡನಾಟದಲ್ಲಿ ನಲಿಯಬೇಕು ಮನವುll ಪಂಕಜಾ.ಕೆ.

2 ಚುಟುಕುಗಳು ಜೇನು ಬಗ್ಗೆ

1..ಮಧುರಸ ಮಧುರಸವ ಹೀರುವ ದುಂಬಿಗಳ ಶ್ರಮ ಸಿಹಿಯಾದಜೇನು ಶ್ರಮ ಜೀವಿಯ ಬಾಳು ಹಾಲು ಜೇನು 2    ಡೈವೋರ್ಸ್ ಜೇನ್ನೊಣ ಗಳು ಕಡಿದಾವೆಂದು ಸಿಹಿ ಜೇನ ಬಿಡುವುದೇ? ಜಗಳವಾಯ್ತೆಂದು ಹಾಲು ಜೇನಿನಂತಿದ್ದ ಸಂಸಾರವನು ತೊರೆಯುವುದೇ?

ಪ್ರೀತಿ

ಪ್ರೀತಿ ನಿನ್ನ   ಅನುರಾಗದ  ಸೆಳೆತದಲಿ ಅದೇನೋ ಮೋಡಿಯೋ ಕಾಣೆ ಮನಸು ನವಿಲಿನ ತೆರದಲಿ ಕುಣಿಸಿ ಮೀಟಿತು  ನನ್ನೆದೆಯ  ವೀಣೆ ಇನಿಯಾ ನೀ ಬಂದು ಸೆಳೆದೆ ನನ್ನ ಕಣ್ಣ ಹೊಮ್ಮಿತು ತನುಮನದಲಿ ಹೊಸ ಬಣ್ಣ ಭಾವನೆಗಳ ಭಾರಕ್ಕೆ ಮನಸು ನವಿಲು ತುಂಬುತಿದೆ ತನುವಲಿ ಯಾವದೋ ಅಮಲು ಪ್ರೀತಿ  ಭಾವವು ಮನದಲಿ ತುಂಬಿ ನೀಎನ್ನ ಚೆಲುವರಸ ಹೀರುವ ದುಂಬಿ ಒಲವ ಸವಿಯಲಿ ಏನು ಘಮಲು ತುಂಬುತಿದೆ ತನುಮನದಲಿ ಅಮಲು ಇನಿಯನಾಸರೆಯು ಬಾಳಿಗೆ ಚಂದ ಒಲವು ತುಂಬಿದ  ಪ್ರೀತಿಯ ಸೆಳೆತ ಬಂಧ ಪ್ರೀತಿ ಜೇನನು  ಹರಿಸು ಮನಕೆ ಮಾದರಿಯಾಗಲಿ ನಮ್ಮಬಾಳು ಜಗಕೆ ಪಂಕಜಾ ಕೆ. ಮುಡಿಪು

ಲಕ್ಷ್ಮಿ ಸ್ತುತಿ. 2

ಲಕ್ಷ್ಮಿ ಸ್ತುತಿ ಪಂಕಜವಾಸಿನಿ ಹರಿ ವಕ್ಷಸ್ಥಳ ನಿವಾಸಿನಿ ಮಂಗಳ ರೂಪಿಣಿ ಜಗದಂಬೆ ll ಸುರಗಣ ಪೂಜಿತೆ ಹರಿಯರಮಣಿ  ನಿತ್ಯವೂ ಕಾಯೋ ಜಗದಂಬೆ ll ಅನುದಿನ ನಿನ್ನಯ ನಾಮವ ಜಪಿಸುತ ಸ್ತುತಿಸುವೆ ನಿನ್ನನು ಭಕುತಿಯಲಿ ll ಕರುಣಿಸಿ ವರಗಳ ಪೊರೆ ನೀಎಮ್ಮನು ಬೇಗನೇ ಬಾರೋ ಮಹಾಲಕ್ಷ್ಮಿ ನಿತ್ಯವೂ ಪೂಜಿಸಿ ಹೂಗಳ ಅರ್ಪಿಸಿ ಭಕುತಿಯಲಿ ನಿನ್ನನು ಭಜಿಸುವೆನುll ಅಂಬುಜಮುಖಿ ಪಂಕಜಲೋಚನೆ ಕಾಯೋ ನಮ್ಮನು ಸಿರಿಲಕ್ಷ್ಮಿ ll ನಿನ್ನಯ ನಾಮವ ಜಪಿಸುತ ಅನುದಿನ ನನ್ನನುನಾನೇ ಮರೆಯುವೆನುll ಪ್ರೇಮ ಸ್ವರೂಪಿಣಿ ವರಗಳ ಕೊಡುತ ಪೊರೆ ನೀ  ನಮ್ಮನು ವರಲಕ್ಷ್ಮಿ ll ಪಂಕಜಾ.ಕೆ ಮುಡಿಪು

ಚೆಲುವೆ

ಚೆಲುವೆ ಚೆಲುವಾದ ಮೊಗದಲಿ ಮುಗುಳುನಗೆ  ಅರಳಿರಲು ಮನಸೋಲದವರಾರು ಹೇಳು ಚೆಲುವೆll ಹೊಳೆ ಹೊಳೆವ ಮುಂಗುರುಳು ನಸುನಗುವ ಚೆಂದುಟಿಯ ಚೆಲುನಗೆಗೆ ಮರುಳಾಗದವರಾರು ಹೇಳು  ಚೆಲುವೆll ಕಣ್ಣೋಟದಲೆ  ಕೆಣಕುತ ಮೈ ಮರೆಸಿ ಹಾಡುತ ನಿಂತಿರುವ ಸೊಬಗಿಗೆ ಒಲಿಯದವರಾರು ಹೇಳು ಚೆಲುವೆll ತಾರೆಗಳ ತೋಟದಲಿ ಚಂದಿರನು ಆಡುವಂತೆ ಒಡನಾಟವ ಬಯಸದವರಾರು ಹೇಳು ಚೆಲುವೆll ಪಂಕಜಾ.ಕೆ. ಮುಡಿಪು

ಒಲವ ಹನಿ. 2

ಒಲವಹನಿ ಅಗಸದಿ ತುಂಬಿರುವ ಮೋಡಗಳ ದಂಡು ಮಳೆಯ ಹನಿಗಳ ಸುರಿಸಿ ತಂದಿತು ಇಳೆಗೆ ತಂಪು ಮುದುಡಿದ ಮನಗಳು ಅರಳುತಿದೆ ಒಲವ ಧಾರೆಯ  ಸವಿದ ಇನಿಯಳಂತೆ ಎಲ್ಲೆಲ್ಲೂ ಹರಿಯುತಿದೆ ನೀರಧಾರೆ ಕೊಚ್ಚಿಹೋಗುತಿದೆ ಇಳೆಯ ಕೊಳೆ ಮನದ ಕರಿ ಮೋಡಗಳು ಬಿರಿದು ಒಲವ ಸಿಂಚನಕೆ ಅರಳಿತು  ಕನಸು ಇನಿಯನೊಲುಮೆಯ ಧಾರೆ ತುಂಬುತಿದೆ ಮನದಲ್ಲಿ ಹರ್ಷಧಾರೆ ಬಾಳಲಿ ಉಕ್ಕುತಿದೆ ಹರ್ಷದ ಹೊನಲು ಮಳೆ ಬಂದು ತಂಪಾದ ಇಳೆಯ ತೆರದಿ ಬಾನು ಸುರಿಸಿದ ಒಲವ ಮುತ್ತುಗಳು ಇಳೆಯ ಮನದಲಿ ಹರ್ಷದ ಕಾರಂಜಿಗಳು ಮಳೆಯ ಒಂದೊಂದು ಹನಿಗಳು ಮುತ್ತಾಯಿತು ಬುವಿಯ ಒಡಲಲಿ ಹಸಿರು ತೆನೆ ತುಂಬಿತು ಒಲವ ಮುತ್ತುಗಳ ಪಡೆದು ಇಳೆಯು ನಕ್ಕಳು ಸಂತಸದಿ ಮೈದುಂಬಿಹೊಸ ರಾಗ ಹಾಡುತ ಎಲ್ಲೆಲ್ಲೂ ಹಬ್ಬಿತು  ಹಸಿರು ಹೂ ಬಳ್ಳಿ ವರುಣನೊಲವಿಗೆ ಇಳೆಗೆ ನವಿರು ಕಂಪನ ಪಂಕಜಾ.ಕೆ.

ಅಜ್ಜಿ ಪೇಟೆ ಪ್ರಯಾಣ ನಗೆ ಕವನ

ಅಜ್ಜಿಯ  ಪೇಟೆ ಪ್ರಯಾಣ ಅಜ್ಜಿಯೊಮ್ಮೆ ಮೊಮ್ಮಗನ ಕಾಣಲೆಂದು ಪೇಟೆ ಬೀದಿಗೆನಡೆದುಕೊಂಡು ಹೊರಟಳು ಪೇಟೆ ತುಂಬಾ ತಿರುಗುತ್ತಿರುವ ಜನರ ಕಂಡು ಬೆರಗಾಗಿ ತೆಗದ ಬಾಯಿ ಮುಚ್ಚಲಿಲ್ಲಅವಳದು ಏನು ಇದು ಇಂತ ವೇಷ ಇಂದು ನವರಾತ್ರಿಯೊ ಅಜ್ಜಿ ಕಣ್ಣುಬಿಟ್ಟುಅವರ ನೋಡುತಲ್ಲಿ ನಿಂತಳು ಉದ್ದಜಡೆ ಗಡ್ಡದಾರಿ  ಹಿಂದೆ ಜುಟ್ಟು ಮುಂದೆ ಮೀಸೆ ಯಾರು ಇವರುಇಷ್ಟು ಜನ ಶಿಖಂಡಿಯೇ ಅಯ್ಯೋ ದೇವ ಹೋಗಲೆಂತು ಇವರಕಣ್ಣು  ತಪ್ಪಿಸಿ ನಾನು ಕೆಟ್ಟೆ ಮುಖವ ಮರೆಸಿ ಹೋಗುತಿರಲು ಮೆಲ್ಲಗೆ ಆಜ್ಜಿ ಎನುತ ತಬ್ಬಿಕೊಂಡ ವೇಶದಾರಿಯ  ಕಾಣಲು ಒಂದೇ ಉಸಿರಿಗೆ ಶಕ್ತಿಯೆಲ್ಲ ಕೂಡಿಸಿಓಡಿ ಓಡಿ ದಣಿದಳು ಹಿಂದೆ ತಿರುಗಿ ನಿಂತು ನೋಡಲು ಹಿಂದಿಂದೆ ಬರುತ್ತಿರುವ ವೇಷಧಾರಿ ಕಂಡಳು ಕೈಆಡಿಸಿ ಕರೆಯುತಿರುವುದ ನೋಡಿ ಇನ್ನಷ್ಟು ಭಯ ಗೊಂಡು ಅಜ್ಜಿ ಕಂಬಿ ಕಿತ್ತಳು ಮನೆಯು ಬರಲು ಅಯ್ಯೋ ಸಾಕು ಪೇಟೆ ಸಹವಾಸ ಎನುತ ನಿಟ್ಟುಸಿರು ಬಿಟ್ಟಳು ಮುಂದೆ ನಿಂತ ವೇಶದಾರಿಯ ಕಂಡು ಅಜ್ಜಿ ಕಕ್ಕಾಬಿಕ್ಕಿಯಾದಳು ಏಕೆ ಓಡಿ ಬಂದೆ ನನ್ನ ಗುರುತು ಇಲ್ಲವೇ ನಾನು ನಿಮ್ಮ ಮುದ್ದು ಪುಳ್ಳಿ ಸಿದ್ದ ಎನಲು ಬೊಚ್ಚು ಬಾಯಿ ಬಿಟ್ಟು ಅಜ್ಜಿ ಕೋಲು ಹಿಡಿದು ಬಂದಳು ಪಂಕಜಾ.ಕೆ. ಮುಡಿಪು

ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆ ಬಂದಿತು ಸ್ವಾತಂತ್ರ್ಯ ದಿನಾಚರಣೆ ಹಾರಿತು ಎಲ್ಲೆಡೆ ತ್ರಿವರ್ಣಧ್ವಜ ಬ್ರಿಟಿಷರು ಆಳಿದ ನೆಲದಲಿ ಹಚ್ಚಿದರು ಸ್ವಾತಂತ್ರ್ಯದ ಹಣತೆ ಉರಿಸಿದರು ಸ್ವಾಭಿಮಾನದ ಸೊಡರು ಬೂದಿಯಾಯಿತೆ ಅದರ ಕಾವು ಯಾರಿಗೆ ಬಂತು ಸ್ವಾತಂತ್ರ್ಯ ಎಲ್ಲಿದೆ ನಮಗೆ ಸ್ವಾತಂತ್ರ್ಯ ಎಲ್ಲೆಲ್ಲೂ ತುಂಬಿದೆ ಕೊಲೆ ಸುಲಿಗೆ ಎಂದಿಗೆ ನಮಗೆ ಇದರಿಂದ ಬಿಡುಗಡೆ ವರ್ಷ ವರ್ಷವೂ  ಹಾರಿಸುವರು  ಬಾವುಟ ಕೇವಲ ಆಚರಣೆಗೆ ಮಾತ್ರ ಅದು ಸೀಮಿತ ಗಡಿಯನ್ನು ಕಾಯುವ ವೀರಯೋಧ ವೈರಿಗಳ ಸದೆಬಡಿಯಲಿದೆಯೇ  ಸ್ವಾತಂತ್ರ್ಯ ಮಕ್ಕಳು ಮುದುಕಿಯರನ್ನೂ ಬಿಡದ ಕಾಮ ಪಿಶಾಚಿಗಳ ನಾಡಾಗಿದೆ ಸ್ವತಂತ್ರ ಭಾರತ ತುಂಬಿದೆ ಎಲ್ಲೆಡೆ ಭ್ರಷ್ಟಾಚಾರ ನಡೆಯುತ್ತಿದೆತೆರೆಮರೆಯಲಿ ಸ್ವೇಚ್ಚಾಚಾರ ಸಿಗಬೇಕು ಕೃಷಿಕರಿಗೆ ಸೈನಿಕರಿಗೆ ಘನತೆ ಗೌರವ ನಿಲ್ಲಬೇಕು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಅದಿಲ್ಲದೆ ಬರಿಯ ಆಚರಣೆಯಲೇನಿದೆ ಸಂಭ್ರಮ ಅರಿಯಬೇಕು ಸ್ವಾತಂತ್ರ್ಯದ ಮೌಲ್ಯ ಉಳಿಸಬೇಕು ತಾಯಿ ಭಾರತಿಯ ಮಾನ ಪ್ರಾಣ ಪಂಕಜಾ.ಕೆ.

ಮಮತೆಯ ಮಡಿಲು

ಮಮತೆಯ ಮಡಿಲು ಮಮತೆಯಾ ಮಡಿಲೊಂದು ಕೈಬೀಸಿ ಕರೆಯುತಿದೆ ಅಣ್ಣ ತಮ್ಮರ ಒಲವು ರಾತ್ರಿ ಹಗಲೂ ಕಾಡುತಿದೆ ಅಕ್ಕ ತಂಗಿಯರ ಜತೆ ನಲಿದಾಡಿದಾ ಮನೆ ತಮ್ಮ ಅಣ್ಣಂದಿರ ಒಲವು ತುಂಬಿ ತುಳುಕಿದಾ ತೆನೆ ಅಪ್ಪ ಅಮ್ಮನ ಮಮತೆಯಾಗರದ ಸೆಲೆ ಅಣ್ಣ ಅತ್ತಿಗೆಯರ ಪ್ರೀತಿ ಸಾಗರದ ಅಲೆ ತವರೂರ ನೆನಪಲ್ಲಿ ಮನಸು ನವಿಲು ಉತ್ಸ್ಸಾಹದ ಅಲೆಗಳಲಿ ತೇಲುತಿದೆ ಒಡಲು ಸವಿಯಾದ ಭಾವದಲಿ ಮನವು ತೇಲಿ ಅರಳಿ ಹೂವಾಗುತಿದೆ ಮನದ ಬೇಲಿ ತವರೂರ ನೆಲದಲ್ಲಿ ಹುಟ್ಟಿ ಬೆಳೆದ ಜಾಗದ ಕಂಪು ಕಟ್ಟಿಹಾಕುತಿದೆ  ನಿತ್ಯವೂ ಇಂದಿಲ್ಲಿ ತವರ ನೆನಪು ಬರಿದಾಗಿದೆ ಇಂದು ತವರೂರ ಆಡುಂಬೊಲ ಒಡಹುಟ್ಟಿದವರಿಲ್ಲದೆ  ಬೀಳು ಬಿದ್ದ  ಹೊಲ ಅಪ್ಪ ಅಮ್ಮನ ನೆನಪು  ಮನದಲಿ ನಿತ್ಯ ಹಸಿರು ಕಣ್ಣಂಚು ತುಂಬಾ ತುಂಬುತಿದೆ ಭಾವದಲೆಗಳ ನೀರು ಎಂದೆಂದೂ ನಗುತಿರಲಿ ನನ್ನ ತವರು ಇರಲಲ್ಲಿ  ಒಲವು ತುಂಬಿದ ಹೂವ ತೇರು ಪಂಕಜಾ.ಕೆ.

ಗಜಲ್. 21 ಉಸಿರು(ಚೆನ್ನ)

ಗಜಲ್. 21 ಬಾನಿನಲಿ ಹರಡಿರುವ ಬಿಳಿಯ ಮುಗಿಲು ಎಷ್ಟು ಚೆನ್ನ ಅಂಬರದಲಿ ತುಂಬಿದ ಬೆಳದಿಂಗಳ ಹಾಲು ಎಷ್ಟು ಚೆನ್ನ ಸೂರ್ಯ ಮೂಡುವ ಮೊದಲೇ ಹಾಸಿಗೆ ಬಿಟ್ಟು ಏಳಬೇಕು ರವಿಕಿರಣದ ಸ್ಪರ್ಶದಲಿ ಮೈ ಮರೆಯಲು ಎಷ್ಟು ಚೆನ್ನ ರಾತ್ರಿಯಾಯಿತೆಂದರೆ ಮನೆಗೆ ಮರಳುವ ಧಾವಂತ ಹಾರಾಡುವ ಹಕ್ಕಿಗಳ ಗುಂಪು ನೋಡಲು ಎಷ್ಟು ಚೆನ್ನ ಹಸಿರು ಗಿಡ ಮರಗಳಲಿ ತುಂಬಿದೆ ಜೀವಿಗಳಿಗೆ ಉಸಿರು ಕೋಗಿಲೆಯ ಸವಿಯಾದ ಗಾನ ಕೇಳಲು ಎಷ್ಟು ಚೆನ್ನ ನವಿಲು ಕುಣಿಯಿತೆಂದು ಕೆಂಬೂತ ಕುಣಿಯುವುದು ಸರಿಯಲ್ಲ ಪಂಕಜಾ ಪ್ರಕೃತಿ ಸೌಂದರ್ಯ ಸವಿಯಲು ಎಷ್ಟು ಚೆನ್ನ ಪಂಕಜಾ.ಕೆ.

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಶಾಯರಿ

ಶಾಯರಿ. ...1 ಬರೆಯಬೇಕೆಂದಿದ್ದೆ ಶಾಯರಿ ಮುಗಿದುಹೋಯಿತು ಪೆನ್ನಿನ ಶಾಯಿರಿ ಏನು ಮಾಡಲಿ ನಾನು ಹೇಳಿರಿ ಗಲ್ಲಕ್ಕೆ ಕೈ ಹಚ್ಚಿ ಕೊಂಡು ಕೂತೇರಿ ಶಾಯರಿ ...2 ನಿನ್ನ ಕಣ್ಣ ಕಾಂತಿ ನೋಡಿ ಬಾನ ತಾರೆ ನಕ್ಕಿತು ನಿನ್ನ ಮೈಯ ಬಣ್ಣದೆದುರು ಚಂದ್ರ ಕಾಂತಿ ಕುಗ್ಗಿತು ಮೃದುಮಧುರ ಮಾತು ಕೇಳಿ ಕೋಗಿಲೆಯ ಉಲಿಯು ನಿಂತಿತು ನಿನ್ನ  ಒಲವ ಕಂಡು ಮನವು ರಾಧಾಕೃಷ್ಣರ ನೆನೆಯಿತು ಪಂಕಜಾ.ಕೆ.

ಮುದ್ದುಕೃಷ್ಣ

ಮುದ್ದು ಕೃಷ್ಣ ಮೆಲ್ಲ ಮೆಲ್ಲ ಬಂದನಲ್ಲ ಮುದ್ದುಕೃಷ್ಣ ಗಲ್ಲಕೊಂದು ಮುತ್ತನಿಟ್ಟ ಚೆಲುವ ಕೃಷ್ಣ ಕೊಳಲಗಾನ ನುಡಿಸಿ ಮನವ ಕದ್ದನಲ್ಲ ಬೃಂದಾವನದ ಸುತ್ತು ತಿರುಗಿಸಿ ದಣಿಸಿದನಲ್ಲ ರಾಧೆ ಒಲವ ಗೆದ್ದುಕೊಂಡ ಮೋಹನಾಂಗ ಗೋಪಿಕೆಯರ ಮನವ ಕದ್ದ ಮದನಮೋಹನ ಗೋವುಗಳ  ಮೇಯಿಸುತ್ತ ಬೆಳೆದ ಕಂದ ಗೋವರ್ಧನಗಿರಿಯನೆತ್ತಿದ ಗೋಪಬಾಲ ದುಷ್ಟ ರಕ್ಕಸ ಕಂಸನನ್ನು ಕೊಂದುಬಿಟ್ಟ ಮಧುರೆಯಲ್ಲಿ ನೆಲೆಸಿ  ತಾನು ಮೆರೆದು ಬಿಟ್ಟ ಸುಧಾಮನ ಗೆಳೆತನಕ್ಕೆ ಒತ್ತು ಕೊಟ್ಟ ಪಾಂಡವರ ರಕ್ಷಣೆಗೆ ನಿಂತು ಬಿಟ್ಟ ಇಂದು ಬರುವೆಯೆಂದು ಹೇಳಿ ಬಿಟ್ಟ ಭಕುತಿಯಲಿ ಅವನ ಭಜಿಸಿ ಕರೆದು ಬಿಟ್ಟೆ ಚಕ್ಕುಲಿ ಉಂಡೆ ಬೆಣ್ಣೆಯನ್ನು ನೈವೇದ್ಯಕ್ಕಿಟ್ಟೆ ಬೇಗ ಬಂದು ಹರಸಬೇಕು ಮುದ್ದು ಕೃಷ್ಣ ಪಂಕಜಾ.ಕೆ.

ಗಜಲ್ 20 ಆತುರ

ಗಜಲ್. 20  ಆತುರ ಮಳೆ ಬಂದಾಗ ಹರಿವ ನೀರಿನಲ್ಲಿ ಆಡುವಾಸೆ ಗರಿಬಿಚ್ಚಿ ಹಕ್ಕಿಗಳಂತೆ ಬಾನಿನಲ್ಲಿ ಹಾರಾಡುವಾಸೆ ತುಂಬಿ ಹರಿಯುವ ತೊರೆಯ ಕಂಡಿದೆ ಮನವು ಮನಸಾರೆ ಅಲೆಗಳಲ್ಲಿ  ತೇಲಾಡುವಾಸೆ ಹೂವ ಮಧುವ ಸವಿಯುತಿವೆ ದುಂಬಿಗಳು  ನಿತ್ಯವೂ ಹೂದೋಟದಲ್ಲಿ  ಅಡ್ಡಾಡುವಾಸೆ ಬಾವನೆಗಳ ಬೆನ್ನೇರಿ  ಓಡುತಿರುವ ಬದುಕು ಕನಸುಗಳ ಕಟ್ಟಿ ಜೀವನದಲ್ಲಿ ನಲಿಯುವಾಸೆ ಆತುರದಲ್ಲಿ ಹೂವನ್ನು  ಕೀಳಬಾರದು ಎಂಬ ಅರಿವಿದೆ ಪಂಕಜಾಗೆ ಪ್ರಕೃತಿ ಸೌಂದರ್ಯದಲ್ಲಿಮೈಮರೆಯುವಾಸೆ ಪಂಕಜಾ.ಕೆ.

ಚೆಲುವ ಭಾವ

      ಚೆಲುವ ಬಾವ ನಾನು ಹೆಣ್ಣು ನೀನು ಗಂಡು ಒಲವೇ ನಮ್ಮ ಜೀವನ ನಾನು ಹೂವು ನೀನು ದುಂಬಿ ಪ್ರೀತಿ ನಮ್ಮ ಬಾವನ ನಾನು ಭೂಮಿ ನೀನು ಭಾನು ಸುರಿಸು ಮಳೆಯ ಹೂರಣ ಸೂರ್ಯ ಚಂದ್ರ ಮಿನುಗುತಾರೆ ಒಲವ ಸುರಿವ ಜೀವನ ನನ್ನ ಒಡಲ ತುಂಬಾ ನಲಿವು ಚೆಲುವ ನೀನೇ  ಇದಕೆ ಕಾರಣ ಎದೆಯ ಬಾವ ತುಂಬಿ ಬಂದು ಕವಿತೆಯಾಗಿ ಸೆಳೆದಿದೆ ಮನದತುಂಬಾ ದುಂಬಿಯಂತೆ ಚೆಲುವ ಬಾವ ಅರಳಿದೆ ಹಮ್ಮು ಬಿಮ್ಮು ನಮ್ಮಲಿಲ್ಲ ಒಲಿದ ಹೃದಯ ಹಾಡಿದೆ ಕೋಗಿಲೆಯ ಇಂಚರವು ಬಾಳ ತುಂಬಾ ತುಂಬಿದೆ ಹೃದಯರಾಗ ಮೀಟಿತೆನ್ನ ನಿನ್ನ ಒಲವ ಗಾಯನ ಮನದ ಗುಡಿಯ ತೆರೆಸಿತೆನ್ನ ನಿನ್ನ ಒಲವ ನೋಟವು ಪಂಕಜಾ.ಕೆ.

ಗಣಪಗೆ ನಮನ

ಗಣಪಗೆ ನಮನ ನಮಿಸುವೆನು ಗಣಪ ನಿನ್ನ ಚರಣ ಕಮಲಗಳಿಗೆ ಗಜಮುಖವದನ ಗಜಾನನ ವಿಘ್ನನಿವಾರಕ ವಿಘ್ನೇಶ್ವರ ಈಶ್ವರ ನಂದನ ಗಣೇಶ್ವರ ಪಾರ್ವತಿ ತನಯ ಗಜಮುಖನೆ ಮೊದಲ ವಂದನೆಯ ಸಲ್ಲಿಸುವೆ ನಿನಗೆ ಭಾದ್ರಪದ ಚೌತಿಯಶುಭದಿನದಿ ಹರಸು ಬಾ ನಮ್ಮನು ಚಕ್ಕುಲಿ ಉಂಡೆ ಕಡುಬುಗಳ ನೈವೇದ್ಯವನಿಟ್ಟು ಬಕುತಿಯಲಿ ನಿನಗೆ ಕರ ಮುಗಿವೆ ಕರುಣೆಯ ತೋರಿ ಕಾಯು ನಮ್ಮನೆಲ್ಲರನು ಎಲ್ಲರ ಮನೆಯ ಬಗೆ ಬಗೆ ತಿಂಡಿಗಳ ತಿಂದು ನಲಿದನು ನಮ್ಮ ಮುದ್ದುಗಣಪ ಹರಸುತ ಭಕ್ತರ ಪೊರೆವ ಭಕ್ತಜನಪ್ರಿಯ ಮೂಷಿಕ ವಾಹನ ಮೋದಕ ಪ್ರೀಯನೇ ಗಜವದನ ನಿನ್ನ ಕೃಪಾಛತ್ರದಲಿಟ್ಟು ಕಾಯು ತಂದೆ ಪಂಕಜಾ.ಕೆ. ಮುಡಿಪು ಕುರ್ನಾಡು

ಹೂಮನಸು

ಹೂ ಮನಸು ಮಂಜಿನಾ ಸ್ಪರ್ಶದಲಿ ಮೈಮರೆತು ನಿಂತಾಗ ಮೆಲ್ಲ ಮೆಲ್ಲನೆ ಬಂದು ಮನಕೆ ಲಗ್ಗೆಯಿಟ್ಟೆಯೇಕೆ ಮಂಜು ಹನಿಗಳು ಕರಗಿ ಮುತ್ತಾಗಿ ಸಾಗುತಿರಲು ಮನದಿ ತುಂಬಿದ  ಭಾವನೆಗೆ ಮುನಿದು  ಕರಗಿದೆಯೇಕೆ ನಿನ್ನ ಕೋಪದ ಬಿಸಿಲಝಳ ಸೋಕಿ  ನಾ  ನಿಂದು ಬೆಂದೆ ಆಸರೆಯು ನೀ ನನಗೆ ಎಂದೆ ಹೂ ಮನಸಲಿ ನೀನಂದು ಕನಸ  ಬಿತ್ತಿದೆಯೇಕೆ ವರುಣ ಬಂದನು ಇಂದು ಬಿಸಿಲ ತಾಪವ ತಣಿಸಿ ಮುದಕೊಟ್ಟ ಮೈ ಮನಕೆ ಅರಳಿ ನಲಿಯಿತು ಜೀವ ಮನಸು ತಂಪಾಯಿತೇಕೆ ತುಂಬಿ ನಿಂತಿತು ಚಿಗುರುಹೂವು ಕಣ್ಣು ತುಂಬುವ ಚೆಲುವು ದುಂಬಿಗಳಾಕರ್ಷಣೆಗೆ ತುತ್ತಾಗಿ ಇಂದು ನಿನ್ನ ಸೇವೆಯಲಿ ನಾ ಧನ್ಯಳಾದೆ ನೀ ನಗುವ ಬೀರುವೆಯೇಕೆ ಪಂಕಜಾ.ಕೆ.

ನೆನಪಿನಲೆಗಳಲಿ

ನೆನಪಿನಲೆಗಳಲಿ ಸಂತಸದ ಹಕ್ಕಿಗಳು ಸವಿಜೇನ ಹೊನಲಾಗಿ ಸಾವಿರ ಸಾವಿರ ಕನಸುಗಳಾಗಿ ಸಾಗುತಿದೆ ಮನದಲಿ ಇಂದು ನಲ್ಲ ನಿನ್ನ  ಸವಿ ನೆನಪು ನಾ ಮುಂದು ತಾ ಮುಂದು ನವಿರಾಗಿ ಮನತುಂಬಿ ನುಗ್ಗುತಿದೆ ಮನದಲಿ ಇಂದು ಹಾರುತಿರುವ ಹಕ್ಕಿಗಳಂದದಿ ಹೊಸಬಾಳ ಪಯಣದಲಿ ಹಾಡುತ್ತಿದೆ  ಹೊಸರಾಗ ಹೂ ಮನದಲಿ  ಇಂದು ನಿನ್ನ ಸಾಂಗತ್ಯವು ಕೊಟ್ಟ ಕುಶಿ ನಿನ್ನೆ ಇಂದಿನದಲ್ಲ ನೋವು ನಲಿವುಗಳೆರಡರ ನೆನಪಾಗಿಕಾಡುತಿದೆಮನದಲಿಇಂದು ನಾವಿಬ್ಬರೊಂದಾಗಿ ಬಾಳಿ ನಗುತ ಸಾಗಿದ ದಿನಗಳು ನೆನಪಾಗಿ  ನಿಂತಿದೆ ನನ್ನ  ಮನದಲಿ  ಇಂದು ಬಾಳ  ಪಯಣದಲಿ ಬಂದು ನೀ ನನ್ನ ಜತೆಯಾಗಿ ಬಿಗಿದಪ್ಪಿ  ಸಂತೈಸಿದಾಕ್ಷಣವು ಬಾಳು ಸಾರ್ಥಕ್ಯ ಪಡೆದನೆನಪು ಬಂದು ನಿಂತಿದೆ ಮನದಲಿ ಇಂದು ಪಂಕಜಾ.ಕೆ.

ಪ್ರೇಮಜ್ಯೋತಿ

ಪ್ರೇಮ ಜ್ಯೋತಿ ನನ್ನ ಜತೆಗೆ ಹೆಜ್ಜೆ ಹಾಕುತ ನನ್ನ ಬಾಳ ಪಯಣದಲ್ಲಿ ಜತೆಗೆ  ಬರುವೆಯ ಚೆಲುವಿಯೇ ನನ್ನ ಒಲವ ತುಂಬಿ ಕೊಡುವೆ ಕಣ್ಣ  ರೆಪ್ಪೆಯಂತೆ  ನಿನ್ನ ಒಲವಿನಿಂದ ಕಾಣುವೆ ಬಾರೆ ನನ್ನ  ಪ್ರೇಮ ಜ್ಯೋತಿ ನೀ ಎನ್ನ  ಭಾಗ್ಯ ಜ್ಯೋತಿ ನೀ ಜತೆಯಲಿದ್ದರೆ  ಬಾಳು ಸುಂದರ ನವಿರು ಹೆಜ್ಜೆಗೆ ಹೆಜ್ಜೆ ಸೇರಿಸಿ ಪ್ರೇಮ ಬಂಧನದಲ್ಲಿ ಬಿಗಿವೆ ನಗುತ  ನೀನು  ಜತೆಗೆ ಸೇರು ನನ್ನ ಪ್ರೇಮ ಜ್ಯೋತಿಯೇ ಬಾಳ ಪಯಣದಲಿ ಜತೆಗೆ ಪ್ರೀತಿಯಿಂದ ನಲಿಯುವ ಒಲವ ಸುಧೆಯ ಸವಿದು ನಾವು ನಗುತ ದಿನವ ಕಳೆಯುವ ಪಂಕಜಾ.ಕೆ.

ಮೊರೆ

ಮೊರೆ ವೆಂಕಟರಮಣನೆ ಸಂಕಟಹರಣನೆ ಮೋದದಿ ನಿನ್ನನು ಭಜಿಸುವೆನು ಸರಸಿಜನೇತ್ರನೇ ಲಕ್ಷ್ಮೀರಮಣನೆ ಅನುದಿನ ನಿನ್ನನು ನೆನೆಯುವೆನು ಸಪ್ತಗಿರಿವಾಸನೆ ಶ್ರೀ ವೆಂಕಟೇಶನೆ ಭವಬಂದನದೊಳು ಸಿಲುಕಿರುವೆನು ಶೇಷಶಯನನೆ ತಿರುಪತಿ ಗಿರಿವಾಸನೆ ಕರಮುಗಿದು ನಿನ್ನನು ಬೇಡುವೆನು ಜಲಜನಾಭನೆ  ಪದ್ಮ ಪಾಣಿಯೇ ತರಳೆಯ ಮೊರೆಯನು ಆಲಿಸೆಯ ಅನುದಿನ ನಿನ್ನಯ ಸೇವೆಯ ಕರುಣಿಸಿ ಮುಕ್ತಿಯ ನೀಡೋ ಪಶುಪತಿಯೇ ಕರಗಳ ಮುಗಿಯುತ ಶಿರವನು ಬಾಗುತ ಅನುದಿನ ನಿನಗೆ ಪೊಡಮಡುವೆ ಮೊರೆಯನು ಆಲಿಸಿ ಪ್ರೇಮದಿ ಬಂದು ನನ್ನನು ಕಾಯೋ ರಾಧಾಮಾಧವ ಗೋವಿಂದ ಪಂಕಜಾ.ಕೆ. ಮುಡಿಪು

ದೀಪಾವಳಿ

ದೀಪಾವಳಿ ಬೆಳಕಿನ ಹಬ್ಬವುದೀಪಾವಳಿ ಎಲ್ಲೆಲ್ಲೂ ಪಟಾಕಿಗಳ  ಹಾವಳಿ ಪರಿಸರವೆಲ್ಲ ಮಲಿನ ಜೀವ ಜಂತುಗಳ ಹರಣ ಹಚ್ಚಬೇಕು ಸಾಲು ಸಾಲು ದೀಪ ಬಿಡಬೇಕು ಪಟಾಕಿಗಳ  ತಾಪ ಸಾಲು ಸಾಲು ಹಣತೆಯ ಹಚ್ಚಿ ಮನೆ ಮನದ ಕಳೆಯ  ಕೊಚ್ಚಿ ಬೆಳಗಬೇಕು ಪ್ರೀತಿ ವಿಶ್ವಾಸದ ಹಣತೆ ಎಲ್ಲರೊಡನೆನಲಿದುಕಳೆಯಬೇಕುಜಡತೆ ಹಬ್ಬದ ಸಂಭ್ರಮಕ್ಕೆ ಸಿಹಿ ಸವಿಯಬೇಕು ಉಲ್ಲಾಸದ ಸವಿ ಜೀವನದ ಏಕತಾನತೆ ಕಳೆದು ಜೀವನೋಲ್ಲಾಸವ ತಳೆದು ನಲಿಯಬೇಕುಎಲ್ಲರೊಡನೊಂದಾಗಿ ದೀಪಜ್ಯೋತಿಯಮನಮನೆಗಳಲ್ಲಿ ಬೆಳಗಿ ಪಂಕಜಾ.ಕೆ.

ಪ್ರಕೃತಿ ಚೆಲುವು

ಪ್ರಕೃತಿ ಚೆಲುವು ಗುಡ್ಡ ಬೆಟ್ಟಗಳಲ್ಲಿ ಹಸಿರ ಬೆಳಕು ನದಿ ತೊರೆಗಳಲಿ ನೀರ ಸೆಳಕು ಗಿಡಮರಗಳಲಿ ಹೂವ ಚೆಲುವು ಹಕ್ಕಿಗಳ ಗಾನದಲಿ ತುಂಬಿದ ಒಲವು ಬಾಂದಳದಿ ಉದಯಿಸಿದ ಶಶಿಯ ಸೊಬಗು ಕಾಣುವ ಕಣ್ಣಲ್ಲಿ ಮೂಡುತಿದೆ ಬೆರಗು ಆಗಸದಿ  ಹರಡಿರುವ ತಾರೆಗಳ ಚೆಲುವು ಮನಕೆ ತುಂಬುತಿದೆ ಸಂತಸದ ಬಲವು ಅರಳಿರುವ ಮಲ್ಲಿಗೆಯ ಘಮಲು ಮನಕೆ ತರುತಿದೆ ಅಮಲು ಮೂಡಣದಿ ಮೂಡುತಿರುವ ರವಿ ಕಿರಣ ಬಾನಿನಲಿ ಕಲಸಿರುವ ಬಣ್ಣಗಳ ಹೂರಣ ಮಂಜು ಮುಸುಕಿದ ಹಾದಿ ಎಲ್ಲೆಲ್ಲೂಇಬ್ಬನಿಯ ಮೋಡಿ ಬೀಸುತ್ತಿರುವ ಕುಳಿರ್ಗಾಳಿ ಎದೆನಡುಗಿಸುವ ಚಳಿಗಾಳಿ ಎಲ್ಲೆಲ್ಲೂ ಹರಡಿರುವ ಮಂಜಿನಾ ಬೆಟ್ಟ ರವಿಕಿರಣದತಾಪಕ್ಕೆನಲುಗಿತಲ್ಲೋಪುಟ್ಟ ಕೊಳದಲ್ಲಿ ಅರಳಿರುವ ತಾವರೆಯ ಅಂದ ಬೆಳ್ಳಕ್ಕಿಗಳ ಸಾಲು ಬಲು ಚಂದ ಪ್ರಕೃತಿಯ ಚೆಲುವಿನ ಘಮಲು ಕವಿಮನಕೆಆನಂದದ  ಅಮಲು ಪಂಕಜಾ.ಕೆ.ಮುಡಿಪು

ನಿನ್ನಾಟ

ನಿನ್ನಾಟ ಮನದಲಿ ನೂರಾರು ಆಸೆಗಳ ತುಂಬಿ ನಿನ್ನಾಗಮನಕೆ ಎದೆತೆರೆದು ಕಾಯುತ್ತಿದ್ದೆ ಆಸೆಯ ಕರಿಮುಗಿಲು ಮನದಲಿ ಕಟ್ಟಿ ಹಸಿರು ಹೂಬಳ್ಳಿ ಚಿಗುರಿಸುವ  ನಿರೀಕ್ಷೆಯಲಿದ್ದೆ ಆಸೆ ನಿರಾಸೆಗಳ ತಾಕಲಾಟದಲಿರಲು ಮುದ್ದಾಡುತ ನೀಬಂದು ಮೈಮರೆಸಿ ಬಿಟ್ಟೆ ಒಡಲು ತುಂಬಿದ ಬೇಗೆಯನು ತಣಿಸಿ ಮನಕೆ ಚೆಲುಉಸಿರ ತುಂಬಿ ಬಿಟ್ಟೆ ಹುಚ್ಚುಪ್ರೀತಿಯ ಅಲೆಯಲಿ ನನ್ನತೇಲಿಬಿಟ್ಟೆ ಕೊಚ್ಚಿಹೋಯ್ತಲ್ಲಾ ನನ್ನ ಒಡಲು ಮೊಸದಾಟಕೆ ಬರಿದಾಯ್ತು ಬಾಳಬಯಲು ಎಲ್ಲೆಲ್ಲೂ ತುಂಬಿತು ಕಣ್ಣೀರ ಹೊನಲು ಹರಿದೋಯ್ತು ಜೀವಿಗಳ  ಬಾಳ ಬಟ್ಟೆ ಹಸಿರು ಉಣಿಸುವ ಆಶೆ ಸತ್ತೋಯ್ತು ಜೀವ ಸೊತ್ತುಗಳೆಲ್ಲಾ ಕೊಚ್ಚಿ ಹೋಯ್ತು ಮನುಜನಾಡಿದ ಮೋಸದಾಟದಲಿ ಮರೆಯಲಾರದಂತ ನೋವು ನಿನ್ನಿಂದಾಯ್ತು ಪಂಕಜಾ ಕೆ.

ಹನಿಕವನ 2

   ಹನಿಕವನ 2        ಪ್ರಳಯ ನಿನ್ನ ಒಲವಿನ ಹನಿಗಾಗಿ ಬಾಯ್ಬಿಟ್ಟು ಕಾದ ನನಗೆ ನೀ ಕೊಟ್ಟ ಉಡುಗೊರೆ ನನ್ನದೆಲ್ಲವ ಕೊಚ್ಚಿ ಕೊಂಡೊಯ್ದ್ದ ಮಹಾಮಳೆ ನಿನ್ನ ಅಬ್ಬರಕೆ ಬೆಚ್ಚಿ ಬೆರಗು ಅಳಿಸಿಹೋಯ್ತು ನನ್ನೆಲ್ಲ ಸೊಬಗು ಸಾಕು ಸಾಕಾಯ್ತು ನಿನ್ನ ಹುಚ್ಚು ಪ್ರೀತಿ ಉಳಿದಿರುವುದೊಂದೇ ತುಂಬು ಭೀತಿ 2.  ಒಗ್ಗಟ್ಟು ಕಾಳು ಕಂಡು ಕರೆಯುತಿವೆ ತನ್ನ ಬಳಗಗಳ ಹಕ್ಕಿಗಳು ಸಕ್ಕರೆಯು ಕಂಡಾಗ ಬರುವುದು ಸಾಲು ಸಾಲು ಇರುವೆಗಳು ಮನುಜನಲಿ ಎಲ್ಲಿದೆ  ಒಗ್ಗಟ್ಟು ದಿನದಿನವೂ ಆಗುತಿದೆ ಬಾಳು ಬಿಕ್ಕಟ್ಟು ಕಲಿಯಬೇಕಿದೆ ಇನ್ನಾದರೂ ನಾವು ಪ್ರಾಣಿ ಪಕ್ಷಿಗಳ ಒಗ್ಗಟ್ಟಿನ ಪಾಠ ಪಂಕಜಾ.ಕೆ.

ಗಜಲ್. 22 ಬೇಟೆ

ಗಜಲ್ 22 ಹಸಿದವನು ಮಾಡುವನು ಆಹಾರದ ಬೇಟೆ ಜ್ಞಾನದಾಹಿ ಹುಡುಕುವನು ಜ್ಞಾನದ ಬೇಟೆ ಪುಸ್ತಕಗಳ ಓದಿನಲ್ಲಿ ಮೈ ಮರೆತಿರುವೆ ನಾ ಮನಕೆ ಇನ್ನಷ್ಟು ಬೇಕೆಂಬ ಇಂಗದ ಬೇಟೆ ವಿದ್ಯೆ ಇದ್ದರೆ ಎಲ್ಲೆಲ್ಲೂ ಸನ್ಮಾನ ದೊರೆತೀತು ವಿಷಯಗಳ ತಿಳಿದಷ್ಟೂ ಕುಂದದ ಬೇಟೆ ತಿಳಿದವರಿಂದ ತಿಳಿಯುತ್ತಾ ಕಲಿಯಬೇಕು ಅರಿತಷ್ಟೂ ಹುಡುಕುವ ಅಪರೂಪದ ಬೇಟೆ ಪಂಕಜಾಳಿಗೆ ಕಲಿತಷ್ಟೂ ತೀರದ ದಾಹ ಕಲಿಯಬೇಕೆನ್ನುವ ಮನದ ತುಡಿತದ ಬೇಟೆ ಪಂಕಜಾ.ಕೆ.

6 ಚುಟುಕುಗಳು

      6..ಚುಟುಕುಗಳು      1.ಹಸಿರು. ಉಸಿರು ಹಸಿರು ಇದ್ದರೆ  ತುಂಬುವುದು ಉಸಿರು ಉಳಿಸಬೇಕು ಭೂತಾಯಿ ಬಸಿರು ಕಾಂಕ್ರೀಟ್ ಕಾಡಲೇನಿದೆ ಸೊಬಗು ಹಸಿರು ತುಂಬಿದ ಕಾನನವು ಬೆರಗು 2  ವ್ಯರ್ಥ ಹಸಿದವನ ಎದುರು ಹಳಸಿದ ಭೋಜನವಿಟ್ಟಂತೆ ಅರ್ಥವಾಗದ ಸಾಹಿತ್ಯ ಎಷ್ಟಿದ್ದರೇನು ವ್ಯರ್ಥ! 3  ನಂಬಿಕೆ ನಂಬಿಕೆ ಇಲ್ಲದಿದ್ದರೆ ಸಂಬಂಧಗಳಲ್ಲಿ ಬಿಕ್ಕಟ್ಟು ಒಗ್ಗಟ್ಟು ಇಲ್ಲದಿದ್ದರೆ ಜೀವನ ಒಂದು ಕಗ್ಗಂಟು 4  ಕಿಡಿ ಪ್ರೀತಿ ವಿಶ್ವಾಸದ ಬೆಳೆಗೆ ಉರಿದು ಭಸ್ಮವಾಗಲು ಸಣ್ಣ ಸಂಶಯದ ಕಿಡಿ ಸಾಕು 5 ಮೋಹ ಹೆಣ್ಣು ಹೊನ್ನು ಮಣ್ಣಿಗಾಗಿ ನಡೆಸಿದನು ಯುದ್ಧ ಕಾಲನ ಕರೆ ಬಂದಾಗ ತಿಳಿಯುತು ತಾನೆಷ್ಟು ಪೆದ್ದ 6   ನಿಯತ್ತು ಕೋಪ ಬಂದಾಗಲೆಲ್ಲ ಬೈಯುವರು ನಾಯಿ ಅವರಿಗೇನು ಗೊತ್ತು ನಾಯಿಯ ನಿಯತ್ತು ಪಂಕಜಾ.ಕೆ

ಲೇಖನ ನಾನೇಕೆ ಬರೆಯುತ್ತೇನೆ

ನಾನೇಕೆ ಬರೆಯುತ್ತೇನೆ ನಾನೇಕೆ ಬರೆಯುತ್ತೇನೆ ಈ ಪ್ರಶ್ನೆಗೆ ಉತ್ತರಿಸುವುದು ಸ್ವಲ್ಪ ಕಷ್ಟ . ಏಕೆಂದರೆ ನಾನು ಪೂರ್ಣ ಪ್ರಮಾಣದ ಬರವಣಿಗೆಯನ್ನು ಪ್ರಾರಂಭಿಸಿದ್ದು ಇತ್ತೀಚೆಗೆ, ಅಂದರೆ ನನ್ನ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು ಕೊಂಡ ಬಳಿಕ               .ನನ್ನ ಮದುವೆ ನಿಶ್ಟಿತಾರ್ಥ ಆದಮೇಲೆ  ನನ್ನವರು ಬರೆಯುತ್ತಿದ್ದ ಪತ್ರಗಳಿಗೆ  ಉತ್ತರ ರೂಪದಲ್ಲಿ ಒಂದೆರಡು ಕವನಗಳನ್ನು ಬರೆದಿದ್ದೆ ಅಲ್ಲದೆ  ಶಾಲಾದಿನಗಳಲ್ಲಿ ಕೆಲವು ಕಥೆ ಕವನಗಳನ್ನು ಬರೆದಿದ್ದೇನಾದರು ಆ ದಿನಗಳಲ್ಲಿ ನನಗೆ ಬರವಣಿಗೆಗಿಂತ ಓದುವುದೇ  ಹೆಚ್ಚು ಇಷ್ಟವಾಗಿತ್ತು ,ಕಥೆ ಲೇಖನಗಳನ್ನು  ಓದುತ್ತಾ ಅದರಲ್ಲಿರುವ ಉತ್ತಮ ಅಂಶಗಳನ್ನು ಒಂದು ಪುಸ್ತಕದಲ್ಲಿ ದಾಖಲಿಸುವ ಹವ್ಯಾಸ ನನ್ನದಾಗಿತ್ತು. ಇತ್ತೀಚೆಗೆ  ಕವಿಗಳು, ಸಾಹಿತಿಗಳು ,ನಿವೃತ್ತ ಪ್ರಾಧ್ಯಾಪಕರು ಹಾಗೂ ನನ್ನ ನೆಂಟರೂ ಆದ ಶ್ರೀ ಗುಣಾಜೆ ರಾಮಚಂದ್ರ ಭಟ್ ಅವರು ತಮ್ಮ ಒಂದು ವಾಟ್ಸಪ್ ಗ್ರೂಪಿಗೆ ನನ್ನನ್ನು ಸೇರಿಸಿ ನನ್ನ ಸಾಹಿತ್ಯಕ್ಕೆ ತುಂಬು ಪ್ರೋತ್ಸಾಹ ವನ್ನು ಕೊಟ್ಟು ನಾನೂ ಬರೆಯಬಲ್ಲೆ ಎನ್ನುವ ಭಾವನೆ ಬೇರೂರಲು ಕಾರಣರಾದರು .  ನಾನು ಬರೆದದ್ದನ್ನು ತಿದ್ದಿ , ನನ್ನಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು  ಗುರುತಿಸಿ ಪ್ರೋತ್ಸಾಹಿಸಿ ನನ್ನ  ಕವನ ಸಂಕಲನಕ್ಕೆ ಮುನ್ನಡಿಯನ್ನು ಬರೆದು ಹುರಿದುಂಬಿಸಿದರು ಈ ಸಂದರ್ಭದಲ್ಲಿ ನನ್ನ ಪತಿ ಮಕ್ಕಳು ಇದಕ್ಕೆ ತುಂಬು ಪ್ರೋತ್ಸಾಹ ವನ್ನು ಕೊಟ್ಟು ನನ್ನ ಬರವಣಿಗೆಯ ಉತ್ಷಾಹ ಇಮ್ಮಡ

ಭಕ್ತಿಗೀತೆ ಸ್ಪರ್ಧೆಯ ವಿಜೇತರು

*ಎಲ್ಲರಿಗೂ ನಮಸ್ಕಾರ* 🙏🙏🙏🙏🙏🙏🙏🙏🙏 *ಭಕ್ತಿರಸದಲ್ಲಿ ಗೀತೆಗಳ ಬರೆದು ಚಂದಿನಂಗಳದಲಿ ದೇವ ದೇವತೆಯರ ಗುಣಗಾನ ಮಾಡಿದರು ನಮ್ಮ ಕವಿಗಳು* 💐💐💐💐💐💐💐💐💐 *ಇಂದಿನ ಅತ್ಯುತ್ತಮ ಗೀತೆ* 🏆 *ಪಂಕಜಾ ಮುಡಿಪುರವರ ಗುರು ಸಾರ್ವಭೌಮ* 🎀🎀🎀🎀🎀🎀🎀🎀🎀 *ಉತ್ತಮವಾಗಿ ಗೀತೆಗಳನ್ನು ಬರೆದವರು* 🏅 *ಅಭಿರವರ ಶ್ಯಾಮನೊಲವು* 🏅 *ಶಿರರವರ ಪ್ರೇಮರೂಪ* 🏅 *ಟಿ ಕೆ ವಿ ಭಟ್‌ರವರ ಭಕ್ತಿಗೀತೆ* 💐💐💐💐💐💐💐💐💐 *ತೀರ್ಪು ಬಳಗ ಮೆಚ್ಚಿದ ಗೀತೆಗಳು* 🎖 *ಕೋರಾಪುರವರ ಏನ ನೀಡಲೋ ನಿನಗೆ* 🎖 *ಭೂಮಿ‌ ಭಾಮರವರ ಕೇಸರಿ ತನಯ ನಮೋಸ್ತುತೆ* 🎖 *ಸಿದ್ದು ಸ್ವಾಮಿ ಅವರ ರಾಧಾ ಮಾಧವ* 😎😎😎😎😎😎😎😎😎 *ಇಂದಿನ ಅತ್ಯುತ್ತಮ ವಿಮರ್ಶಕರು* ✒ *ಆನಂದ್ ಎಸ್ ಎನ್‌ರವರು* 👌🏻👌🏻👌🏻👌🏻👌🏻👌🏻👌🏻👌🏻👌🏻 *ಇಂದಿನ ಅಡ್ಮಿನ್* 👏👏 *ಗೋಪಿ ಹಂದನಕೆರೆ ಸರ್* *ನಾಳೆಯ ಅಡ್ಮಿನ್* *ಬಳಗದ ಸರ್ವ ಸದಸ್ಯರು* 😊😊😊😊😊😊😊😊😊 *ನಾಳೆ ರವಿವಾರ* *ನಾನೇಕೆ ಬರೆಯುತ್ತೇನೆ (ಕಿರು ಲೇಖನ)* 🤔 *(೫೦ ಸಾಲಿನ ಮಿತಿ ಇರಲಿ)* *ಫೋಟೋಗಳನ್ನು ಬಳಗಕ್ಕೆ ಹಾಕುವಂತಿಲ್ಲ.* 🙏🙏🙏🙏🙏🙏🙏🙏🙏 *ಸರ್ವರಿಗೂ ಶುಭವಾಗಲಿ*