Skip to main content

Posts

Showing posts from January, 2023

ದಿನ ದರ್ಶಿಕೆ

 ಬದಲಾದ ವರ್ಷ ವರುಷವೊಂದು ಉರುಳಿದಾಗ ಬದಲಾಯಿತು  ದಿನದರ್ಶಿಕೆ ಮರಳಿ ಮರಳಿ ಬರುತಲಿರುವ ಹಬ್ಬಗಳ  ಮಾಹಿತಿಯ ತಿಳುವಳಿಕೆ ತಿಂಗಳಿನ  ಅಂಗಳದ ವಿವರವೆಲ್ಲ  ಸಿಗುವುದಿದರಲಿ ಮಂಗಳದ ಸುದಿನಕ್ಕೆ ದಿನವ ಗಣಿಸುವುದಿದರಲಿ ಹಬ್ಬ ಹರಿದಿನಗಳ ಮಾಹಿತಿಯು  ತೋರುತಿರುವುದು  ಪ್ರತಿಮನೆಯ  ಗೋಡೆಯಲ್ಲಿ  ಒಂದು  ದಿನದರ್ಶಿಕೆ ಇರುವುದು ಪ್ರತಿಯೊಂದು ವಿಷಯವನು  ಗುರುತಿಸುವರು ಇದರಲ್ಲಿ ಸಡಗರದಿ ಸ್ವಾಗತಿಸುವರು ಹೊಸವರ್ಷಕೆ  ನಾಂದಿಹಾಡುತಿಲ್ಲಿ ಪಂಕಜಾ.ಕೆ ರಾಮಭಟ್. ಮುಡಿಪು

ತಾಯಿ ದೇವರು

ತಾಯಿ ದೇವರು ಅಮ್ಮಾ ಎಂದರೆ ಮಮತೆಯ ಕಡಲು ಸುಖ ದುಃಖಕೆ ಸಾಂತ್ವನದ ಹೆಗಲು ಪ್ರೀತಿ ವಿಶ್ವಾಸ ಸ್ನೇಹದ ಮಡಿಲು ತ್ಯಾಗ  ಕರುಣೆಯ ಒಲವಿನ  ಒಡಲು ಮಗುವನ್ನು ಬೆನ್ನಲಿ ಹೊತ್ತು ತಿರುಗುವಳು ಎಷ್ಟೇ ಕಷ್ಟ ಬಂದರೂ ಸಹಿಸಿ ನಗುವಳು ಕಂದನ ನಗುವಲ್ಲೇ ತನ್ನ ಸುಖವನ್ನು ಕಾಣುವಳು ಮಮತಾಮಯಿ ತಾಯಿ ಧರೆಗಿಳಿದ ದೇವತೆಯವಳು ತನ್ನ ಕಷ್ಟವನ್ನು ಕಡೆಗಣಿಸಿ ಬಿಡುವಳು ಹೆತ್ತು ಹೊತ್ತು ಮಮತೆಯಲಿ ಸಾಕಿ ಸಲಹುವಳು  ಕಂದನ ಏಳಿಗೆಗಾಗಿ ಹಗಳಿರುಳೂ ದುಡಿಯುವಳು ಮಗುವನ್ನು  ಕಣ್ಣಲ್ಲಿ ಕಣ್ಣಿಟ್ಟು ಕಾಯುವಳು ಪಂಕಜಾ.ಕೆ. ರಾಮಭಟ್  ಮುಡಿಪು

ತನ್ನಂತೆ ಪರರ ಬಗೆ

ತನ್ನಂತೆ ಪರರ ಬಗೆ ನಡೆ ನುಡಿಯ ತಿದ್ದಿಕೊಳ್ಳಲು ಆತ್ಮಾವಲೋಖನ ಮಾಡಿರಿ ತನ್ನ ತಪ್ಪುಗಳನ್ನು ಮುಚ್ಚುತ ಪರರನು ತೆಗಳಬೇಡಿರಿ ತನ್ನಂತೆ ಪರರ ಬಗೆಯುತ   ಒಳಿತು ಬಯಸುತ ನಡೆಯಿರಿ ಬಾಳ ಹೆಜ್ಜೆಯ ದಾರಿಯೆಲ್ಲವ ನಿತ್ಯ ಹಿಂತಿರುಗಿ ನೋಡಿರಿ ನಾಲಿಗೆಯನು ಹಿಡಿತದಲಿಡುತ ಎಲ್ಲರೊಡನೆ ಬೆರೆಯಿರಿ ಜೀವ ಭಾವವು ಸಾರ್ಥಕತೆ ಪಡೆಯಲು ಬೇಧಬಾವವ ಬಿಡುತಿರಿ ಪಂಕಜಾ.ಕೆ.  ರಾಮಭಟ್ ಮುಡಿಪು

ಗಜಲ್

 ಗಜಲ್   ಸುಂದರ ವದನದ ಹಿಂದಿನ ಕರಾಳತೆಯ ತೋರಲಿಲ್ಲವೇಕೆ ಹೇಳು ಮಂದಹಾಸವ   ತೋರುತ್ತ ಮನದಾಳದ ನೋವನು ಮುಚ್ಚಿಟ್ಟೆಯೇಕೆ ಹೇಳು ಕುಂದು ಕೊರತೆ ತೋರದಂತೆ   ನಿನ್ನನ್ನು  ನೋಡಿಕೊಂಡಿರುವೆನಲ್ಲವೇ ಒಂದು ದಿನವೂ  ನಿನ್ನ ಆಸೆಗಳನ್ನು ವ್ಯಕ್ತಪಡಿಸಲಿಲ್ಲವೇಕೆ ಹೇಳು ಮದುವೆಯಾಗಿ ಬಂದಂದಿನಿಂದಲೂ  ನಿನಗಾಗಿ ಹಗಲಿರುಳು ದುಡಿದೆ ನಾನು ಎದೆ  ತುಂಬಾ  ಮೊಗೆ ಮೊಗೆದು ಪ್ರೀತಿ ಕೊಟ್ಟರೂ ಮೌನಗಿರುವೆಯೇಕೆ ಹೇಳು ನನ್ನ ಬರಡು  ಜೀವನಕೆ ಸಂಜೀವಿನಿಯಾಗಿ ಬಂದಿರುವೆ ನೀನು  ಸಖಿ ಮುನ್ನಿನ ದಿನದ ನೆನಪಿನಲಿ ಸುಮ್ಮನೆ  ಕೊರಗಿ ಬಸವಳಿಯುವೇಕೆ ಹೇಳು ಹಿಂದು ಮುಂದಿಲ್ಲದ  ನನ್ನನ್ನು ಪ್ರೀತಿಸಿ ನಿನಗೆ ಸುಖವಿಲ್ಲವಾಯಿತೆ ಪಂಕಜಾ ಹಿಂದೆಂದೂ ಇಲ್ಲದ  ಬಯಕೆಗಳ ತೋರುತ್ತ ಮೈಮನವ  ಕಾಡುವೆಯೇಕೆ ಹೇಳು ಪಂಕಜಾ.ಕೆ. ರಾಮಭಟ್ .ಮುಡಿಪು

ಹಾಯ್ಕುಗಳು

1 ಹಾಯ್ಕುಗಳು ಪ್ರಯತ್ನಿಸಿ ಅಳಿಯದಂತಿರಲು ನೀರ ಸೆಳೆಯ ಬಾಳು ಸೊಗಸು ನೀನು ಜತೆಯಾದರೆ ನನ್ನ ಬಾಳಿಗೆ ಸಹಕರಿಸಿ ಮನೆಬೆಳಗುವಲ್ಲಿ ಹೆಣ್ಣು ಮಕ್ಕಳೇ ಉಸಿರಿಗಾಗಿ ಉಳಿಸಿ ಬೆಳೆಸಿರಿ ಹಸಿರುಕಾಡು ಪಂಕಜಾ

ದೇಶದ ಬೆನ್ನೆಲುಬು

ದೇಶದ ಬೆನ್ನೆಲುಬು ಅನ್ನವ ನೀಡುವ ರೈತನು ಇದ್ದರೆ ಬನ್ನವು ಇಲ್ಲವು ಬದುಕಿನಲಿ ಹೊನ್ನಿನ ಬೆಳೆಯನು ಬೆಳೆಯುವ ರೈತನು  ಬಾಳನು  ಸಾಗಿಸುವ  ಸಹನೆಯಲಿ ದೇಶದ  ಬೆನ್ನೆಲುಬೆನ್ನುವ  ರೈತನು ಸಾಲದ ಶೂಲಕೆ  ಏರುವನು ಬೆಳೆದಿಹ ಬೆಳೆಗೆ ಫಲವದು ಸಿಗದೆ ನೋವಲಿ  ನೇಣಿಗೆ ಶರಣಾಗುವನು ಈಸಬೇಕು ಇದ್ದು ಜಯಿಸಬೇಕು  ಎನ್ನುವ ಮಂತ್ರವ ತಿಳಿ ನೀನು ನೇಣಿಗೆ ಶರಣು  ಬೇಡವು  ರೈತ ಬದುಕಲಿ ಭರವಸೆ ಇಡು ನೀನು ಒಳ್ಳೆಯ ದಿನಗಳು ಬರುವುದು ಬೇಗನೆ ದೇವರ ನಂಬುತ ದುಡಿಯುತಿರು ಸರಕಾರದ ಸವಲತ್ತುಗಳ ಪಡೆಯುತ ಬಾಳನು ಹಸನಾಗಿಸುತಿರು ಪಂಕಜಾ.ಕೆ. ರಾಮಭಟ್ .ಮುಡಿಪು