ಮುಂಜಾವಿನ ರವಿತೇಜ
ಬಾನಲಿ ಹಾಸಿದ ಬಣ್ಣದ ಸೆರಗನು
ಸರಿಸುತ ಬಂದನು ರವಿತೇಜ
ರವಿತೇಜನ ಬಿಸಿ ಸ್ಪರ್ಶಕೆ ನಾಚಿ
ತಾವರೆ ಅರಳಿತು ಕೊಳದಲ್ಲಿ
ಬಾನಲಿ ಬರುವ ರವಿತೇಜನ ಕಂಡು
ಹಕ್ಕಿಗಳುಲಿದವು ಮುದದಿಂದ
ಗಿಡದಲಿ ಅರಳಿದ ಬಗೆ ಬಗೆ ಹೂಗಳು
ನರುಗಂಪನು ಎಲ್ಲೆಡೆ ಹರಡಿದವು
ಮರದಲಿ ಗೂಡನು ಕಟ್ಟಿದ ಹಕ್ಕಿಗಳಿಂಚರ
ಮನಕೆ ಮುದವನು ತುಂಬುತಿದೆ
ಮನದಲಿ ತುಂಬಿದ ಉಲ್ಲಾಸ
ಮುಖದಲಿ ಮೂಡಿಸಿತು ಮಂದಹಾಸ
ಹೂಗಳ ನರುಗಂಪನು ಸವಿಯುತ
ನಾಸಿಕದ ಹೊಳ್ಳೆಗಳರಿದವು
ಹುಲ್ಲಿನ ಹಾಸಲಿ ಹರಡಿದ ಇಬ್ಬನಿ
ಮುತ್ತಿನ ಮಣಿಗಳ ತೆರದಿ ತೋರುತಿದೆ
ಬಾನಲಿ ಕಲಸಿದ ಚೆಲುವಿನ ಬಣ್ಣ
ತುಂಬಿತು ಮನಸಿನ ಕಣ್ಣ
ಮುಂಜಾವಿನ ಈ ಸುಂದರ ದೃಶ್ಯ
ಸವಿಯುತ ಕಣ್ಣುಗಳೆರಡು
ಸಾರ್ಥಕ್ಯದ ಭಾವವ ತಾಳಿದವು
ಎಲ್ಲೆಡೆ ತುಂಬಿದ ಪ್ರಕೃತಿಯಸಿರಿ
ಕವಿಮನದಲಿ ಕವಿತೆಯ
ಒರತೆಯ ಸ್ಪುರಿಸುತಿದೆ
ಪಂಕಜಾ.ಕೆ. ಮುಡಿಪು
Comments
Post a Comment