ಬಿಡುವಿಲ್ಲ
ಮಾವಿನ ಮರದಲಿ ತುಂಬಿದೆ ಕಾಯಿ
ಹೊಡೆಯುವ ಕೈಗಳಿಗೆ ಬಿಡುವಿಲ್ಲ
ಆಟದ ಅಂಗಳ ಬೀಕೋ ಎನುತಿದೆ
ಮೊಬೈಲ್ ಹಿಡಿದ ಕೈಗಳಿಗೆ ಆಡುವ ಮನಸಿಲ್ಲ
ಚಿಣ್ಣರೆ ಬನ್ನಿರಿ ಜತೆಯಲಿ ಕುಣಿಯಿರಿ
ಆಟವ ಆಡುತ ದಣಿಯೋಣ
ಮೈ ಮನಕೆಲ್ಲಾ ಉತ್ಸಾಹವ ತುಂಬುತ
ಆಟದ ಸವಿಯನು ಸವಿಯೋಣ
ಕೋಕೋ ಕ್ರಿಕೆಟ್ ಚಿನ್ನಿದಾಂಡು
ಆಟದ ಸಾಲೆ ಇರುವುದು ನೋಡು
ದಿನ ದಿನವೂ ಜತೆಯಲಿ ಆಡುತ
ಪ್ರೀತಿಯ ಮನದಲಿ ತುಂಬೋಣ
ಒಬ್ಬರ ಕಷ್ಟಕೆ ಇನ್ನೊಬ್ಬರು ಮರುಗುತ
ಜತೆಯಲಿ ಜೀವನ ಸವಿಯನು ಸವಿಯೋಣ
ಆಟವ ಆಡುತ ಕಲಿಯುವ ಚಂದ
ಮೈ ಕೈಗೆಲ್ಲಾ ವ್ಯಾಯಾಮದ ಬಂಧ
ಚಿಣ್ಣರೆ ತಿಳಿಯಿರಿ ಆಟದ ಖುಷಿಯನು
ಜತೆಯಲಿ ಆಡುತ ಮೈ ಮರೆಯೋಣ
ಪಂಕಜಾ. ಕೆ
Comments
Post a Comment