ನಾನೇಕೆ ಬರೆಯುತ್ತೇನೆ
ನಾನೇಕೆ ಬರೆಯುತ್ತೇನೆ ಈ ಪ್ರಶ್ನೆಗೆ ಉತ್ತರಿಸುವುದು ಸ್ವಲ್ಪ ಕಷ್ಟ . ಏಕೆಂದರೆ ನಾನು ಪೂರ್ಣ ಪ್ರಮಾಣದ ಬರವಣಿಗೆಯನ್ನು ಪ್ರಾರಂಭಿಸಿದ್ದು ಇತ್ತೀಚೆಗೆ, ಅಂದರೆ ನನ್ನ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು ಕೊಂಡ ಬಳಿಕ
.ನನ್ನ ಮದುವೆ ನಿಶ್ಟಿತಾರ್ಥ ಆದಮೇಲೆ ನನ್ನವರು ಬರೆಯುತ್ತಿದ್ದ ಪತ್ರಗಳಿಗೆ ಉತ್ತರ ರೂಪದಲ್ಲಿ ಒಂದೆರಡು ಕವನಗಳನ್ನು ಬರೆದಿದ್ದೆ ಅಲ್ಲದೆ ಶಾಲಾದಿನಗಳಲ್ಲಿ ಕೆಲವು ಕಥೆ ಕವನಗಳನ್ನು ಬರೆದಿದ್ದೇನಾದರು ಆ ದಿನಗಳಲ್ಲಿ ನನಗೆ ಬರವಣಿಗೆಗಿಂತ ಓದುವುದೇ ಹೆಚ್ಚು ಇಷ್ಟವಾಗಿತ್ತು ,ಕಥೆ ಲೇಖನಗಳನ್ನು ಓದುತ್ತಾ ಅದರಲ್ಲಿರುವ ಉತ್ತಮ ಅಂಶಗಳನ್ನು ಒಂದು ಪುಸ್ತಕದಲ್ಲಿ ದಾಖಲಿಸುವ ಹವ್ಯಾಸ ನನ್ನದಾಗಿತ್ತು. ಇತ್ತೀಚೆಗೆ ಕವಿಗಳು, ಸಾಹಿತಿಗಳು ,ನಿವೃತ್ತ ಪ್ರಾಧ್ಯಾಪಕರು ಹಾಗೂ ನನ್ನ ನೆಂಟರೂ ಆದ ಶ್ರೀ ಗುಣಾಜೆ ರಾಮಚಂದ್ರ ಭಟ್ ಅವರು ತಮ್ಮ ಒಂದು ವಾಟ್ಸಪ್ ಗ್ರೂಪಿಗೆ ನನ್ನನ್ನು ಸೇರಿಸಿ ನನ್ನ ಸಾಹಿತ್ಯಕ್ಕೆ ತುಂಬು ಪ್ರೋತ್ಸಾಹ ವನ್ನು ಕೊಟ್ಟು ನಾನೂ ಬರೆಯಬಲ್ಲೆ ಎನ್ನುವ ಭಾವನೆ ಬೇರೂರಲು ಕಾರಣರಾದರು . ನಾನು ಬರೆದದ್ದನ್ನು ತಿದ್ದಿ , ನನ್ನಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ನನ್ನ ಕವನ ಸಂಕಲನಕ್ಕೆ ಮುನ್ನಡಿಯನ್ನು ಬರೆದು ಹುರಿದುಂಬಿಸಿದರು ಈ ಸಂದರ್ಭದಲ್ಲಿ ನನ್ನ ಪತಿ ಮಕ್ಕಳು ಇದಕ್ಕೆ ತುಂಬು ಪ್ರೋತ್ಸಾಹ ವನ್ನು ಕೊಟ್ಟು ನನ್ನ ಬರವಣಿಗೆಯ ಉತ್ಷಾಹ ಇಮ್ಮಡಿಯಾಗಲು ಸಹಕರಿಸಿದರು .ಇತ್ತೀಚೆಗೆ ಸ್ನೇಹ ಸಂಗಮ ಬಳಗದ ಶ್ರೀಮತಿ ಪ್ರಮೀಳಾ ಚುಳ್ಳಿಕಾನ ಅವರು ನನ್ನನ್ನು ಸ್ನೇಹ ಸಂಗಮ ಬಳಗಕ್ಕೆ ಪರಿಚಯಿಸಿದರು .ಈ ಬಳಗಕ್ಕೆ ಸೇರಿದಮೇಲೆ ಬಳಗದೆಲ್ಲರ ನಿರಂತರ ಪ್ರೋತ್ಸಾಹ ಮತ್ತುಬಳಗದ ಸಾಹಿತ್ಯಾಭಿಮಾನಿಗಳ ಜತೆಯ ಒಡನಾಟದಿಂದ ನಿತ್ಯವೂ ನಾನು ಬರವಣಿಗೆಯಲ್ಲಿ ತೊಡಗಿಕೊಳ್ಳಲು ಕಾರಣವಾಯಿತು .ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಅನ್ನುವ ಗಾದೆಯಂತೆ ಈ ಬಳಗದ ಸಜ್ಜನರು ನನ್ನ ಬರವಣಿಗೆಯ ಲೋಪ ದೋಷಗಳನ್ನು ತಿದ್ದಿ ನನಗೆ ದಾರಿದೀಪವಾದರು .ನನ್ನ ಬರವಣಿಗೆಗೆ ವಿಮರ್ಶೆಯ ಮುಖಾಂತರ ಶಕ್ತಿ ತುಂಬಿ ನಿತ್ಯವೂ ಬರೆಯಲು ಪ್ರೇರಣೆಯಾದರು .ಈಗ ದಿನಕ್ಕೊಮ್ಮೆ ಏನನ್ನಾದರೂ ಬರೆಯದೆ ಇದ್ದರೆ ಏನನ್ನೋ ಕಳೆದುಕೊಂಡ ಭಾವನೆ ನನ್ನನ್ನುಕಾಡುತ್ತದೆ .ಬಳಗದೆಲ್ಲರ ಸಹಕಾರ ಪ್ರೋತ್ಸಾಹದಿಂದ ಸಾಹಿತ್ಯ ಸರಸ್ವತಿ ಸೇವೆಗಾಗಿ ನಿತ್ಯವೂ ಬರೆಯುತ್ತೇನೆ...... ಬರೆಯುತ್ತಲೇ. ..... ಇರುತ್ತೇನೆ ಉಸಿರು ನಿಲ್ಲುವ ತನಕ.......
ಪಂಕಜಾ. ಕೆ. ಮುಡಿಪು
Comments
Post a Comment