ಮಮತೆಯ ಮಡಿಲು
ಮಮತೆಯಾ ಮಡಿಲೊಂದು ಕೈಬೀಸಿ ಕರೆಯುತಿದೆ
ಅಣ್ಣ ತಮ್ಮರ ಒಲವು ರಾತ್ರಿ ಹಗಲೂ ಕಾಡುತಿದೆ
ಅಕ್ಕ ತಂಗಿಯರ ಜತೆ ನಲಿದಾಡಿದಾ ಮನೆ
ತಮ್ಮ ಅಣ್ಣಂದಿರ ಒಲವು ತುಂಬಿ ತುಳುಕಿದಾ ತೆನೆ
ಅಪ್ಪ ಅಮ್ಮನ ಮಮತೆಯಾಗರದ ಸೆಲೆ
ಅಣ್ಣ ಅತ್ತಿಗೆಯರ ಪ್ರೀತಿ ಸಾಗರದ ಅಲೆ
ತವರೂರ ನೆನಪಲ್ಲಿ ಮನಸು ನವಿಲು
ಉತ್ಸ್ಸಾಹದ ಅಲೆಗಳಲಿ ತೇಲುತಿದೆ ಒಡಲು
ಸವಿಯಾದ ಭಾವದಲಿ ಮನವು ತೇಲಿ
ಅರಳಿ ಹೂವಾಗುತಿದೆ ಮನದ ಬೇಲಿ
ತವರೂರ ನೆಲದಲ್ಲಿ ಹುಟ್ಟಿ ಬೆಳೆದ ಜಾಗದ ಕಂಪು
ಕಟ್ಟಿಹಾಕುತಿದೆ ನಿತ್ಯವೂ ಇಂದಿಲ್ಲಿ ತವರ ನೆನಪು
ಬರಿದಾಗಿದೆ ಇಂದು ತವರೂರ ಆಡುಂಬೊಲ
ಒಡಹುಟ್ಟಿದವರಿಲ್ಲದೆ ಬೀಳು ಬಿದ್ದ ಹೊಲ
ಅಪ್ಪ ಅಮ್ಮನ ನೆನಪು ಮನದಲಿ ನಿತ್ಯ ಹಸಿರು
ಕಣ್ಣಂಚು ತುಂಬಾ ತುಂಬುತಿದೆ ಭಾವದಲೆಗಳ ನೀರು
ಎಂದೆಂದೂ ನಗುತಿರಲಿ ನನ್ನ ತವರು
ಇರಲಲ್ಲಿ ಒಲವು ತುಂಬಿದ ಹೂವ ತೇರು
ಪಂಕಜಾ.ಕೆ.
Comments
Post a Comment