ಹಂಬಲ. (ಭಾವಗೀತೆ)
ಜೀವವೊಂದು ಕಾಯುತಿದೆ
ಕಾತರದ ಕಣ್ಣುಗಳು ಬಾಗಿಲೆಡೆಗೆ
ಸುಕ್ಕುಗಟ್ಟಿದ ದೇಹ
ಪರೆ ತುಂಬಿದ ಕಣ್ಣುಗಳು
ನಡುಗುತಿದೆ ಕೈ ಕಾಲುಗಳು
ಮಮತೆ ತುಂಬಿದ ಮನಸು
ಅಡಿಗಡಿಗೆ ಒಸರುವ ಕಣ್ಣೀರು ಒರೆಸುತ್ತ
ಕಾಯುವಳು ಬಾಗಿಲಲಿ ನಿತ್ಯ
ಇಂದು ಬಂದಾನು ನಾಳೆ ಬಂದಾನು
ಮರೆಯಲಾರ ನಾನಿತ್ತ ಕೈ ತುತ್ತನು
ಹೊತ್ತು ಹೆತ್ತಳಾಕೆ ಮಮತೆಯಿಂದ
ಕಷ್ಟ ನಷ್ಟಗಳ ಭರಿಸಿ ಸಾಕಿದಳು ಪ್ರೀತಿಯಿಂದ
ರೆಕ್ಕೆಬಂದಹಕ್ಕಿಗೂಡ ಬಿಟ್ಟು ಹಾರಿಹೋಯಿತು
ಹೆತ್ತಬ್ಬೆಯ ಬಾರ ಸಹಿಸದಾಯ್ತು
ಹೆತ್ತು ಹೊತ್ತು ಸಾಕಿದ್ದಕ್ಕೆ ಮಾತೆಗಾಯ್ತು
ಅನಾಥಾಶ್ರಮದ ಅನ್ನದ ತುತ್ತು
ಕಣ್ಣೀರು ಒರೆಸುವ ಕೈಯಿಲ್ಲ
ಮನದ ಮಾತುಗಳ ಕೇಳುವವರಿಲ್ಲ
ಕಷ್ಟ ಸುಖಗಳಲಿ ಕರುಳ ಕುಡಿ ಜತೆಗಿಲ್ಲ
ಒಬ್ಬಂಟಿ ದಿನಗಳ ನೂಕುತ ದಿನಗಣನೆ
ಇನ್ನೆಷ್ಟು ದಿನ ಬದುಕಿನ ಈ ಬವಣೆ
ನಿಟ್ಟುಸಿರು ಬಿಡುತಿಹಳು ತಾಯಿ
ದೇವ ಕರುಣೆ ತೋರೆನಗೆ
ಕೈ ಮುಗಿದು ಬೇಡುತಿಹಳು ಮಾತೆ
ಕಾಯುತಿರುವುದು ಜೀವ ಬಾಗಿಲಲಿ
ಇಂದು ಬಂದಾನೋ ನಾಳೆ ಬಂದಾನೋ
ಪಂಕಜಾ.ಕೆ
Comments
Post a Comment