ಗಜಲ್. (ಸೆಳೆತದ ಬಗ್ಗೆ )
ಈ ಸೌಂದರ್ಯದ ಹೊಳಪಿಗೆ ಮರುಳಾದೆ ನಲ್ಲೆ
ಕಣ್ಣ ನೋಟದ ಸೂಜಿಗಲ್ಲಿಗೆ ಬಲಿಯಾದೆ ನಲ್ಲೆ
ಪ್ರೇಮವೆಂಬುದು ಹಾಗೆ ಮನಕೆ ಮುದವು
ಪ್ರೀತಿಯ ಮೋಹಕತೆಗೆ ಸೆರೆಯಾದೆ ನಲ್ಲೆ
ಚೆಂದುಟಿಯ ನಗುವಿನಲಿದೆ ಏನೋ ಸೆಳೆತ
ಭಾವನೆಗಳ ಕಡಲಲಿ ಮುಳುಗಿಸಿದೆ ನಲ್ಲೆ
ಒಲವ ಜೇನನು ಹರಿಸುವೆಯೆಂದು ಕಾದೆ
ನನ್ನೊಡಲ ಬೇಗುದಿಯ ತಣಿಸಬಾರದೆ ನಲ್ಲೆ
ನೀ ಮುಡಿದ ಮಲ್ಲಿಗೆ ಯಲಿದೆ ಘಮಲು
ಮನಸು ಅಮಲಿನಲಿ ತೇಲುತಿದೆ ನಲ್ಲೆ
ನಸು ನಾಚಿ ಬೀರುವ ನೋಟವದು ಬಲು ಚಂದ
ಒಲಿದ ಜೀವ ಬಾಹು ಬಂಧನವ ಬಯಸಿದೆ ನಲ್ಲೆ
ಕುಸುಮ ಕೋಮಲ ಪಂಕಜಾಳ ಮನವಿದು
ಸವಿ ನೆನಪುಗಳನು ಮೆಲುಕು ಹಾಕುತಿದೆ ನಲ್ಲೆ
ಪಂಕಜಾ.ಕೆ
Comments
Post a Comment