ಪ್ರಕೃತಿ ಸಿರಿ
ಮಾಮರದಲ್ಲಿ ಅರಳಿದ ಹೂಗಳು
ಸುಮದುರ ಗಂಧವ ಹರಡುತಿದೆ
ದುಂಬಿಗಳ ಝೇಂಕಾರವು ತುಂಬಿ
ಮನಕೆ ಮುದವನು ತುಂಬುತಿದೆ
ಚುಮು ಚುಮು ಚಳಿಯಲಿ
ಹಕ್ಕಿಗಳ ಚಿಲಿಪಿಲಿ ಗಾನದ ಸವಿ
ಮನದಲಿ ಆನಂದದ
ತೆರೆಗಳ ಉಕ್ಕಿಸಿದೆ
ಕವಿದಿಹ ಮಂಜಿನ
ತೆರೆಯನು ಸರಿಸಿ
ಸುತ್ತಲೂ ಪ್ರಭೆಯನು ಹರಡಿ
ಬಾನಲಿ ರವಿ ಮೂಡಿದನು
ಬೆಳಗಿನ ಜಾವದಿ ಎಳೆಬಿಸಿಲಿನ ಸ್ಪರ್ಶ
ತಂದಿತು ಮೈ ಮನಕೆ ಉಲ್ಲಾಸ
ಹಸಿರಿನ ಹುಲ್ಲಿನ ಮೇಲಿನ ಹನಿಯಲಿ
ಹೊಳೆಯಿತು ಸೂರ್ಯನ ಕಿರಣ
ಮೋಡದ ಮರೆಯಲಿ ಇಣುಕುವ ಚಂದಿರ
ರವಿ ಉದಯಿಸಲು ಮರೆಯಾದ
ಬಾನಲಿ ತೇಲುತ ಬಿಸಿಲನು ಹರಡಿ
ಪಡುಗಡೆಯಲಿ ರವಿ ಮರೆಯಾದ
ತಿಂಗಳ ಬೆಳಕನು ಧರೆಯಲಿ ಹರಡಿ
ತಾರೆಗಳನೊಡನಾಡುತ ಚಂದಿರ ಬಂದ
ಬೆಳದಿಂಗಳ ತಂಪಲಿ ಮೀಯುತ
ತರುಲತೆಗಳು ಅನಂದದಿ ತಲೆದೂಗುತಿವೆ
ತಲೆದೂಗುವ ಹಸಿರಿನ ಎಡೆಯಲಿ
ಅರಳಿದ ಹೂಗಳ ಗಂಧವು ತುಂಬಿ
ಹಳ್ಳಿಯ ಸೊಬಗಿನ ನೋಟವ ಕಂಡು
ಮೈಜುಮ್ಮೆನ್ನುವ ಭಾವವು ತುಂಬುತಿದೆ
ಪ್ರಕೃತಿಯ ಸಿರಿಯಲಿ ಮೈ ಮರೆಯುತಿರಲು
ಸ್ವರ್ಗವೇ ಧರೆಗಿಳಿದಂತಹ ಭಾವ
ಮರಗಿಡಗಳನು ಬೆಳೆಸುತ ಉಳಿಸೋಣ
ಹಸಿರಿನ ಉಸಿರಲಿ ನಲಿಯೋಣ
ಪಂಕಜಾ.ಕೆ
Comments
Post a Comment