ಗಜಲ್
ಅಂಬಾರಿಯನು ಹೊತ್ತ ಜಂಬೂ ಸವಾರಿ ನೋಡೋಣವೇನೇ ಸಖಿ
ತಿರುಗುವ ರಾಟೆಯಲಿ ಜತೆಯಾಗಿ ಕುಳಿತುಕೊಳ್ಳೋಣವೇನೇ ಸಖಿ
ವರ್ಷ ವರ್ಷವೂ ಜಾತ್ರೆ ಮೇಳಗಳು ಅಲ್ಲಲ್ಲಿ ಬರುತಿದೆ
ಸಂತೆಯಲಿ ಸುತ್ತಾಡುತ ನಲಿಯೋಣವೇನೇ ಸಖಿ
ವರುಷಪೂರ್ತಿ ಸಂಭ್ರಮದ ಹಬ್ಬಗಳು ಎಲ್ಲೆಡೆಯೂ ಇರುವವು
ನಿನ್ನೊಡನೆ ನಲಿದಾಡಲು ನೆಪಬೇಕಲ್ಲವೇನೇ ಸಖಿ
ಅಷ್ಟು ದೂರನಿಂತೇಕೆ ನಿತ್ಯ ಕಾಡುವೆ ನೀನು ಹೇಳು
ಇನ್ನಷ್ಟು ಹತ್ತಿರಬರಲು ಭಯಪಡಬಹುದೇನೇ ಸಖಿ
ನೋಡು ಬಾನಲ್ಲಿ ಚಂದಿರ ಎಷ್ಟೊಂದು ನಗುತಿರುವನು
ನಮ್ಮ ಸರಸ ಅವನಿಗೂ ಖುಷಿ ಕೊಟ್ಟಿತೇನೇ ಸಖಿ
ಹೊಸ ಬಟ್ಟೆಯನ್ನು ಉಟ್ಟು ಸಂಭ್ರಮದಿಂದ ನಲಿದಾಡುವೆಯಲ್ಲ
ನನ್ನ ನೋಡಿದಾಗಲೆಲ್ಲಾ ಒರೆನೋಟವ ಬೀರುವೆಯೇನೇ ಸಖಿ
ನಿನ್ನ ನೆನಪಲ್ಲಿ ನಿತ್ಯ ಮುಳುಗಿರುವೆ ನಾನು ಪಂಕಜಾ
ಬಾಳ ಪಯಣದಲಿ ಜತೆಯಾಗಿ ಸಾಗೋಣವೇನೇ ಸಖಿ
ಪಂಕಜಾ.ಕೆ.
Comments
Post a Comment