ಚಿತ್ರಾಯಣ..32
ಹೆಸರು..ಹಸಿರು..ಉಸಿರು
ಉಸಿರು...
ಹಸಿರಿನ ಸಿರಿಯಲಿ ಉಸಿರಿನ ಬಲೆಯಲಿ
ನಲಿಯುತಲಿರುವುದು ಮನೆಯೊಂದು
ಸುತ್ತಲೂ ಹಸಿರಿನ ಬೆಟ್ಟಗುಡ್ಡಗಳು ತುಂಬಿ
ಸ್ವರ್ಗವು ಧರೆಗಿಳಿದಂತೆ ತೋರುವುದು
ಮುಂದಿನ ಅಂಗಳ ತುಂಬಾ ಬಿತ್ತಿದ ಬೆಳೆಯು
ಹಸಿರಿನ ಹಾಸಿಗೆ ಹಾಸಿದ ತೆರದಿ ತೋರುವುದು
ಚಂದದ ಮನೆಯಲಿ ಅಂದದಿ ನಲಿಯುತ
ಹಸಿರಿನ ಉಸಿರನು ಸವಿಯುತ ನಲಿಯೋಣ
ಹಳ್ಳಿಯ ಮನೆಯದು ಚಂದದ ಬಂಧವು
ಪ್ರಕೃತಿಯ ಮಡಿಲೇ ಸ್ವರ್ಗಸದೃಶ ಜೀವನವು
ನೀರಿಗೆ ಉಸಿರಿಗೆ ಬರವೇ ಇಲ್ಲದ
ಪ್ರಕೃತಿ ರಮ್ಯ ಸುಂದರ ತಾಣವದು
ಬೆಳಗಿನ ಜಾವವೇ ಚುಮು ಚುಮು ಚಳಿಯಲಿ
ಬಿಸಿ ಬಿಸಿ ಕಾಪಿಯ ಹೀರುವ ಆನಂದ
ತಿಂಡಿಯ ತಿಂದು ಗದ್ದೆಯಲ್ಲಿ ದುಡಿದು
ಹಂಡೆಯ ಬಿಸಿನೀರಿನಲಿ ಮೀಯುವ ಸುಖ
ಜಾಗಟೆ ಗಂಟೆಯ ಸದ್ದನು ಮಾಡಿ
ಭಕುತಿಯಲಿ ದೇವರ ಪೂಜೆಯ ಮಾಡಿ
ಬಿಸಿ ಬಿಸಿ ಊಟದ ಸವಿಯನು ಸವಿದು
ನಿದ್ದೆಯ ಮತ್ತಲಿ ಮೈಯನು ಚಾಚಿ
ಸಂಜೆಯ ಕಾಪಿಯಾ ಸಮಯಕೆ ಎದ್ದು
ಒತ್ತಡವಿಲ್ಲದೆ ಬದುಕುವ ಚಂದ
ಹವ್ಯಕರ ಹಳ್ಳಿಯ ಮನೆಯ ವೈಭೋಗದ ದೃಶ್ಯ
ಪಂಕಜಾ.ಕೆ.
Comments
Post a Comment