ಯೋಧ
ಗಡಿಯನು ಕಾಯುತ
ಎಡೆಯಲಿ ನುಸುಳುವ
ಪಡೆಯನು ಹಿಂದಕೆ ನೂಕುವನು
ಒಡನೆಯೆ ನೋಡುತ
ಬಿಡದೆಯೆ ಹಾಯುವ
ಕೇಡಿಯ ಜತೆಯಲಿ ಕಾದುವನು
ದೇಶದ ಸೇವೆಯು
ಈಶನದೆನುತಲಿ
ವೇಶವ ಹಾಕುತ ದುಡಿಯುವನು
ಮೋಸವ ಮಾಡದೆ
ನಾಶವ ಗೈಯದೆ
ದೇಶವ ಕಾಯಲು ನೋಡುವನು
ಭ್ರಷ್ಟರ ನೂಕುತ
ಇಷ್ಟರ ಜತೆಯಲಿ
ಕಷ್ಟದಿ ಜೀವನ ಕಳೆಯುವನು
ಇಷ್ಟವ ಬಿಡುತಲಿ
ನಷ್ಟವ ಗಣಿಸದೆ
ಕಷ್ಟದ ಕಾಯಕ ಮಾಡುವನು
ಭಯವನು ಕಳೆಯುತ
ಜಯವನು ಪಡೆಯಲು
ಹಯವನು ಏರುತ ಕಾದುವನು
*ನಯವಂಚಕರನು*
*ದಯೆಯನು ತೋರದೆ*
*ಲಯಗೊಳಿಸುತಲವ ಮೆರೆಯುವನು*||
ನಗುವನು ಬಿಡುತಲಿ
ಜಗವನು ಗೆಲ್ಲಲು
ಸೊಗದಲಿ ಕಾಯಕ ಮಾಡುವನು
ಹಗೆಯನು ತರಿಯುತ
ಲಗುಬಗೆಯಿಂದಲಿ
ಜಗವನು ಗೆಲ್ಲಲು ಕಾದುವನು
*ಶಿರವನು ಎತ್ತುತ*
*ಭರದಲಿ ನಡೆಯುತ*
ಅರಿಯನು ತರಿಯಲು ಕಾಯುವನು |
ಹರಿಯನು ನಂಬುತ
ಗುರಿಯನು *ಸೇರಲು*
*ಧುರದಲಿ ಹೆಜ್ಜೆಯ ಹಾಕುವನು* ||
ಪಂಕಜಾ.ಕೆ
Comments
Post a Comment