ಮಳೆಬಿಲ್ಲು (ಮಕ್ಕಳ ಕವನ)
ಬಾನಲಿ ತುಂಬಿದ ಕರಿಮೋಡಗಳು
ಕರಗುತ ಸುರಿಸಿತು ಮಳೆಯನ್ನು
ಕರಗಿದ ಮೋಡದ ಎಡೆಯಲಿ ಮಿನುಗುತ
ಭರದಲಿ ಬಂದನು ರವಿತೇಜ
ಪಕ್ಕನೆ ಮೂಡಿದ ಎಳೆ ಬಿಸಿಲಿನ ಕಿರಣಕೆ
ಮೂಡಿತು ಬಾನಲಿ ಕಾಮನಬಿಲ್ಲು
ಮೂಡಣದಿಂದ ಪಡುವಣ ವರೆಗೆ
ಹರಡಿದೆ ಚೆಲುವಿನ ಬಣ್ಣ
ಮಳೆ ಮೋಡಗಳ ಘರ್ಷಣೆ ಎಡೆಯಲಿ
ಮೂಡಿದ ರವಿಕಿರಣದ ಸೊಬಗು
ಮಳೆನೀರಿನ ತುಂತುರ ಎಡೆಯಲಿ
ಹೊರಡಲು ಸೂರ್ಯನ ಕಿರಣ
ಕಟ್ಟಿತು ಬಾನಲಿ ಚೆಲುವಿನ ಬಿಲ್ಲು
ತಂದಿತು ಮನಸಿಗೆ ಮುದವು
ಏಳು ಬಣ್ಣಗಳಲಿ ಕಣ್ಣನು ಸೆಳೆದು
ಗಗನದಿ ಹರಡಿದೆ ಕಾಮನಬಿಲ್ಲು
ನೀಲಾಗಸದಲಿ ಬೆಡಗನು ಹರಡಿ
ತುಂಬಿತು ಮಕ್ಕಳ ಮೊಗದಲಿ ಬೆರಗು
ಬಾನಿಗೆ ತೋರಣ ಕಟ್ಟಿದ ತೆರದಲಿ
ಏಳು ಬಣ್ಣದ ಕಮಾನು ನೋಡಲ್ಲಿ
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment