ದಿಟ್ಟ ಹೆಜ್ಜೆ (ಸ್ಪರ್ಧೆಗಾಗಿ)
ಅಂಜದಿರು ಅಳುಕದಿರು ಸೋತೆನೆಂದು
ಛಲವಿರಲಿ ಮನದಲ್ಲಿ ಗೆಲುವೆನೆಂದು
ಸಾಧಿಸಲು ಬಹಳವಿದೆ ಎದ್ದೇಳು ಮಿತ್ರನೇ
ಸೋತು ಗೆಲ್ಲುವ ಗುಟ್ಟು ತಿಳಿ ನೀನು ವೀರನೇ
ಆಗದು ಎಂದು ಕೈ ಕಟ್ಟಿ ಕುಳಿತಿರಬೇಡ
ಇಟ್ಟಿರುವ ಹೆಜ್ಜೆಯನು ಹಿಂದಿಡಬೇಡ
ಬಿದ್ದರೂ ಎದ್ದು ನಡೆ ಮುಂದೆ ನೀನು
ನಗುವವರ ಎದುರಿನಲಿ ತಲೆಯೆತ್ತಿ ನಿಲ್ಲು
ನಿಂದಕರು ಇರಬಹುದು ಎದೆಗುಂದಬೇಡ
ಇಂದು ನಿಂದಿಸುವವರು ನಾಳೆ ಹೊಗಳುವರು ನೋಡ
ಹೊಗಳಿಕೆ ಗೆ ಉಬ್ಬದಿರು ತೆಗಳಿಕೆಗೆ ಕುಗ್ಗದಿರು
ನಿನ್ನ ತನವನು ಮೆರೆದು ತೋರು ನೀನು
ಸೋಲು ಗೆಲುವಿನ ಮೆಟ್ಟಿಲೆಂದು ತಿಳಿ
ಕತ್ತಲಾಯಿತೆಂದು ಅಳುತಾ ಕೂತರೆ
ಉದಯಿಸುವ ಸೂರ್ಯನನು ನೋಡಲಾರೆ
ಕತ್ತಲು ಬೆಳಕು ಒಂದರ ಹಿಂದೊಂದು ತಿಳಿ
ಗಟ್ಟಿ ಮನಸಿನ ದಿಟ್ಟ ನಿಲುವಿರಲು
ಮೆಟ್ಟಿ ನಿಲ್ಲಬೇಕು ಸೋಲೆಂಬ ಮುಳ್ಳನು
ನವೋಲ್ಲಾಸವ ಬದುಕಲ್ಲಿ ತುಂಬುತಾ
ಗೆಲುವಿನಾ ಶಿಖರವನು ಏರಬೇಕು
ಪಂಕಜಾ.ಕೆ.ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment