ಭೂರಮೆಯ ಚೆಲುವು
ನಳನಳಿಸಿ ನಲಿಯುತಿದೆ ಭೂತಾಯಿ ಒಡಲು
ಕಂಗು ತೆಂಗುಗಳಿಂದ ತುಂಬಿದೆ ಬಯಲು
ಹಸಿರು ಹೊದಿಕೆಯ ಹಾಸಿ ನಲಿಯುತಿದೆ ಪ್ರಕೃತಿ
ಮಾನವನ ದುರಾಶೆಗೆ ಆಗದಿರಲಿ ಅದು ವಿಕೃತಿ
ಮಳೆ ಬಂದು ತಂಪಾಗಿ ರೈತನ ಮೊಗದಲಿ ನಲಿವು
ಹೊಲದ ತುಂಬಾ ಪಚ್ಚೆತೆನೆ ಬರಲು ಗೆಲುವು
ಉತ್ತು ಬಿತ್ತಿ ಹಸಿರನ್ನು ತುಂಬಿಸಿದ ಇಳೆಯಲಿ
ಶುಕ ಪಿಕಗಳು ಹಾಡಿ ನಲಿಯುತಿದೆ ಹಸಿರಲಿ
ಹಸಿರ ಹೊದಿಕೆಯಲಿ ಭೂರಮೆಯ ಶೃಂಗಾರ
ಅರಳಿರುವ ಹೂಗಳ ಮಾಲೆಯದೆ ಅಲಂಕಾರ
ಎಲ್ಲೆಲ್ಲೂ ಹಚ್ಚ ಹಸಿರಿನ ಸಿರಿ ಮೈತುಂಬಿ ನಿಂತಿದೆ ಭುವನ ಸುಂದರಿಯನ್ನೂ ಮೀರಿಸುವಂತಿದೆ
ಬಣ್ಣಬಣ್ಣದ ಹೂಗಳ ಚೆಲುವು ಕಣ್ಣು ತುಂಬಿದೆ
ಮೈ ಮನಸು ಹಸಿರಲಿ ನಲಿದು ಮಗುವಾಗಿದೆ
ಮಧುಹೀರಲು ಬರುತಿರುವ ದುಂಬಿಗಳ ದಂಡು
ಕವಿ ಮನವು ಗುನುಗುತ್ತಿದೆ ಕವಿತೆಯ ತುಂಡು
ಭೂರಮೆಯ ತುಂಬೆಲ್ಲ ಹಾಸಿದೆ ಹಸಿರ ಸೆರಗು
ವಸುಂಧರೆಯ ಒಡಲೆಲ್ಲಾ ಹೂಗಳ ಮೆರುಗು
ಕಣ್ಣು ತುಂಬುತಿದೆ ಪ್ರಕೃತಿಯ ಈ ಚೆಲುವು
ವರುಣನ ಒಲವ ಮಳೆಯಲಿ ಪ್ರಕೃತಿಯ ಗೆಲುವು
ಪಂಕಜಾ.ಕೆ.ಮುಡಿಪು
Comments
Post a Comment