ಜಡೆ ಕವನ
ಅನುಮಾನದ ಸುಳಿವು ಬಾರದಿರಲಿ ಒಲವಿನಲಿ
ಒಲವಿನಲಿ ನಗುತ ಸಾಗುತಿರಲಿ ನಮ್ಮ ಜೀವನ
ಜೀವನವು ಸಂತಸ ತುಂಬಿದ ಸ್ನೇಹದ ಒರತೆ
ಒರತೆಯಲಿ ಬತ್ತದೆ ಹರಿಯಲಿ ಪ್ರೀತಿಯ ಝರಿ
ಝರಿಯ ನೀರಲಿ ಆಡುತ ಕುಣಿಯುವ ಆಸೆ
ಆಸೆಗಳು ನೂರಾರು ಮನವ ಕಾಡುತಿದೆ
ಕಾಡುವ ನಿನ್ನ ನೆನಪಿನಲಿ ನೋಯುತಿದೆ ಮನ
ಮನಸಿನಲಿ ಅನುದಿನವೂ ನಿನ್ನದೇ ಧ್ಯಾನ
ಧ್ಯಾನದಿಂದ ಮನವು ನೆಮ್ಮದಿಯ ಕಾಣುವುದು
ಕಾಣುವ ಕಣ್ಣಲ್ಲಿ ಕಾತರವು ತುಂಬಿದೆ
ತುಂಬಿದ ಒಡಲಲ್ಲಿ ಅನುರಾಗದ ಓಲೆ
ಓಲೆಯ ಬರೆಯುತ ಕುಳಿತಿರುವೆ ನಲ್ಲೆ
ನಲ್ಲೆ ನಮ್ಮಿಬ್ಬರ ಪ್ರೀತಿಗೆ ಇರದಿರಲಿ ಎಲ್ಲೆ
ಎಲ್ಲೇ ಇರು ನೀನು ಎಂದೆಂದೂ ಸುಖವಾಗಿರು
ಸುಖವಾಗಿ ನಗುನಗುತ ನನ್ನ ಮನೆ ತುಂಬಿರು
ತುಂಬಿರುವ ಎದೆಯಲ್ಲಿ ಏಕೆ ಅನುಮಾನದ ಸುಳಿ
ಪಂಕಜಾ.ಕೆ.ಮುಡಿಪು
Comments
Post a Comment