ಮಾಗಿಯ ಚಳಿ
ವಾರ್ಧಕ ಷಟ್ಪದಿ
ಮಾಗಿಯಾ ಚಳಿಗಾಳಿ ಬೀಸುತಿದೆ ಬಿರುಸಿನಲಿ
ಬಾಗುತಾ ತರುಲತೆಯು ನಲಿಯುತಿದೆ ಹರುಷದಲಿ
ತೂಗುತಿದೆ ನೋಡುಗರ ಮನಸನ್ನು ಸೆಳೆಯುತ್ತ ಹೊಸ ಕನಸು ಬಿತ್ತುತ್ತಲಿ
ಸಾಗುತಿಹ ಮೋಡಗಳು ಚಿತ್ರಗಳ ಬರೆಯುತ್ತ
ಬೀಗುತಿದೆ ಮರಗಿಡವು ಹಸಿರುಟ್ಟು ನಲಿಯುತ್ತ
ಬೇಗೆಯಲಿ ಬೇಯುತಿಹ ಮನುಜನಾ ಮನಸಿನಲಿ ಹುರುಪನ್ನು ತುಂಬುತ್ತಲಿ
ಹಾಡುತಿದೆ ಕೋಗಿಲೆಯು ಮುದದಿಂದ ಕುಣಿಯುತ್ತ
ಕಾಡುತಿದೆ ಚಿಗುರುತಿಹ ವನರಾಜಿ ಮೈಮನವ
ಮಾಡುತಿದೆ ಮೋಡಿಯನು ಕೈಬೀಸಿ ಕರೆಯುತ್ತ ರಸಿಕರಾ ತನುಮನವನು
ಬಾಡಿರುವ ಜೀವಕ್ಕೆ ಹೊಸತನವ ಕೊಡುತಿದ್ದು
ಜಾಡಿಸುತ ತುಂಬಿರುವ ಜಡತೆಯನು ಕಳೆಯುತ್ತ
ನಾಡಿನೆಲ್ಲರ ಮನಕೆ ಸಡಗರವ ತುಂಬಿಸುತ ಬಂದಿಹುದು ದೀಪಾವಳಿ
ಪಂಕಜಾ.ಕೆ. ಮುಡಿಪು
Comments
Post a Comment