ಪ್ರಕೃತಿ ಸೌಂದರ್ಯ
ಮೂಡಣ ಬಾನಲಿ ಮೂಡಿದ ದಿನಕರ
ತೊಡಿಸಿದ ಬಣ್ಣದ ಅಂಗೀಯನು
ಮೋಡಿಯ ಮಾಡುತ ಕಣ್ಣನು ಸೆಳೆದನು
ಕಾಡುತ ಮುದವನು ತುಂಬಿದನು
ಕಾಡಿನ ಎಡೆಯಲಿ ನಲಿಯುತ ಹಕ್ಕಿಯು
ಹಾಡಿತು ರಾಗದಿ ಮುದದಿಂದ
ಬಾಡಿದ ಜೀವಕೆ ಹುರುಪನು ತುಂಬುತ
ಹರಡಿದ ಬಣ್ಣವ ಭರದಿಂದ
ಹಕ್ಕಿಗಳೆಲ್ಲವು. ಬಾನಲಿ ಹಾರುತ
ಚುಕ್ಕಿಗಳಂತೆಯೇ ಕಾಣುತಿವೆ
ಮಕ್ಕಳ ಮನವನು ತನ್ನೆಡೆ ಸೆಳೆಯುತ
ರೆಕ್ಕೆಯ ಬಡಿಯುತ ಹಾರುತಿವೆ
ಹೂಗಳು ಅರಳುತ ಗಂಧವ ಚೆಲ್ಲುತ
ಸೊಗದಲಿ ಸೆಳೆಯಿತು ರಸಿಕರನು
ಬಗೆ ಬಗೆ ಬಣ್ಣವ ತುಂಬಿದ ಸುಮಗಳು
ನಗುತಲಿ ಕರೆದಿವೆ ದುಂಬಿಯನು
ಸುಂದರ ಪ್ರಕೃತಿಯು ಮುದದಲಿ ನಲಿಯುತ
ಕಂದನ ತೆರದಲಿ ಮನ ಸೆಳೆಯುತಿದೆ
ಬಂಧವ ಬೆಸೆಯುತ ಮೈಮನ ಮರೆಯಿಸಿ
ಕುಂದಿದ ಜೀವಕೆ ಮುದ ತುಂಬುತಿದೆ
ಪಂಕಜಾ.ಕೆ. ಮುಡಿಪು
Comments
Post a Comment