ಕಾಯಕಯೋಗಿ
ಮುಸುಕಿದ ಮೋಡವು ಮಳೆಯನು ಸುರಿಸಲು
ಹಾಸಿತು ಹಸಿರಿನ ತೇರು
ಬೀಸುತ ಗಾಳಿಯು ಇಳೆಯನು ತಬ್ಬಲು
ಹಾರಿತು ತುಂತುರು ನೀರು
ಗುಡುಗುಡು ಗುಡುಗುತ ವರುಣನು ಬರಲು
ಧರೆಯಲಿ ತುಂಬಿತು ಹರ್ಷ
ಚಿಗುರನು ಮೂಡಿಸಿ ತರುಲತೆ ನಲಿಯಲು
ಬಿರಿಯಿತು ಸಗ್ಗದ ವರ್ಷ
ಗಡಗಡ ನಡುಗುವ ಚಳಿಯಲಿ ರೈತನು
ಹೊರಟನು ಗೇಯಲು ಹೊಲದೆಡೆಗೆ
ಹೆಂಟೆಯ ಒಡೆಯುತ ಗದ್ದೆಯ ಬಯಲಲಿ
ಬೆಳೆವನು ಬೆಳೆಯ ಹಲವುಬಗೆ
ಕನಸನು ಕಣ್ಣಲಿ ಮೂಡಿಸುತಿರುತಲಿ
ದುಡಿವನು ಶ್ರಮದಲಿ ಮಣ್ಣಿನಲಿ
ಹಗಲಿರುಳೆನ್ನದೆ ಹೊಲವನು ಕಾಯುತ
ಪಡೆಯುವ ಹೊನ್ನನು ಕಸುವಿನಲಿ
ಪಂಕಜಾ..ಕೆ. ರಾಮಭಟ್ ಮುಡಿಪು
Comments
Post a Comment