ಚೆಲುವಿನ ಪ್ರಕೃತಿ
ಪೂರ್ವ ದಿಗಂತದಿ ಬಣ್ಣವ ಚೆಲ್ಲುತ
ಸೂರ್ಯನು ಮೂಡಿದ ನಭದಲ್ಲಿ
ಗಿಡಮರಗಳಲಿ ಗೂಡನು ಕಟ್ಟಿದ
ಹಕ್ಕಿಗಳುಲಿದವು ಮುದದಲ್ಲಿ
ಬಾನಿನ ಬಯಲಲಿ ಹಾರುತ ಕುಣಿಯುತ
ತಿನಿಸನು ಹುಡುಕಲು ತೆರಳಿದವು
ಕೋಗಿಲೆಗಳು ಮಾಮರದೆಡೆಯಲಿ
ಸಣ್ಣನೆ ರಾಗದಿ ಹಾಡಿದವು
ಗಾಳಿಯು ಮೆಲ್ಲನೆ ಬೀಸುತಲಿರಲು
ತಂಪನು ತಂದಿತು ಮೈಮನಕೆ
ಗಿಡಮರಗಳೆಲ್ಲವು ತಲೆಯನು ತೂಗಲು
ಸ್ವಾಗತವದು ರವಿಯುದಯಕ್ಕೆ
ಹೂಗಳು ಅರಳುತ ಗಂಧವ ಸೂಸುತ
ದುಂಬಿಗಳನು ತಾ ಕರೆಯುತಿವೆ
ತರ ತರ ಬಣ್ಣದ ಚಿಟ್ಟೆಗಳೆಲ್ಲವು
ಮಧುವನು ಹೀರುತ ನಲಿಯುತಿವೆ
ಮೋಡಿಯ ಮಾಡುವ ಪ್ರಕೃತಿಯ ಸಿರಿಯಲಿ
ಮೈಮನ ಮರೆಯುವ ಭಾವವಿದೆ
ಪ್ರಕೃತಿಯ ಶಿಶು ನಾನೆಂದೆನುತಲಿ
ಸುಂದರ ಪರಿಸರದಲಿ ತನುವರಳುತಿದೆ
ಪಂಕಜಾ.ಕೆ.. ಮುಡಿಪು
Comments
Post a Comment