ಸ್ವಾತಂತ್ರ್ಯದ ಸವಿ
ಮೂಡಣದ ಬಾನಿನಲಿ ರವಿ ಮೂಡಿ ಬಂದಿಹನು
ಆಗಸದಿ ಬಣ್ಣವನು ಕಲಸುತ್ತಲಿ
ಬಂಧನವ ಕಡಿದೊಗೆದು ಹಾರುತಿವೆ ಹಕ್ಕಿಗಳು
ಸ್ವಚ್ಛಂದದಾನಂದ ಸವಿಯುತ್ತಲಿ
ಸ್ವಾತಂತ್ರ್ಯದಾ ಸವಿಯನ್ನು ಸವಿಯುತಿವೆ ಮುದದಿಂದ
ಹಾಡುತಲಿ ರಾಗದಲಿ ಮೈ ಮರೆಯುತಾ
ಕಾಡುತಿವೆ ಪ್ರಕೃತಿಯಾ ಸೌಂದರ್ಯ ರಸಿಕರನು
ಮೈಮನದ ಆಯಾಸ ಪರಿಹರಿಸುತಾ
ಕಾಡಿನಾ ಮರದೆಡೆಯಲಿ ಕಟ್ಟುತಲಿ ಗೂಡನ್ನು
ಜೋಡಿಯಾ ಜತೆಯಲ್ಲಿ ನಲಿಯುತಿಹುದು
ಬೀರುತಿಹ ಹೊಂಗಿರಣದ ಸೊಬಗಿನಲಿ ಹಾರುತ್ರ
ಒಗ್ಗಟ್ಟಿನಲಿ ಕೂಡಿ ಬಾಳುತಿಹುದು
ಕಲಸಿರುವ ಬಣ್ಣಗಳು ಮೈಮನವ ಮರೆಸುತಿದೆ
ರವಿ ಮೂಡುವಾ ಸೊಬಗು ಕಣ್ಸೆಳೆದಿದೆ
ಬಾನಿನಲಿ ಗರಿಬಿಚ್ಚಿ ಹಾರುತಿಹ ಹಕ್ಕಿಗಳು
ರಸಿಕರಾ ಮನವನ್ನು ತಾ ಸೆಳೆದಿದೆ
ಪಂಕಜಾ.ಕೆ. ಮುಡಿಪು
Comments
Post a Comment