*ಹೊಸವರುಷದ ಸಂಭ್ರಮ* ಕಾವ್ಯಧಾರೆ
ಮಾಗಿದ ಹಣ್ಣನು ನೋಡುತ ಮರದಲಿ
ಕೋಗಿಲೆ ರಾಗದಿ ಕೂಜನ ಗೈದಿದೆ
ಬೀಗುತ ಮಾಮರ ಚಿಗುರನು ಮೂಡಿಸಿ ತಲೆಯನು ತೂಗುತಿದೆ
ಮಾಗಿಯ ಚಳಿಯದು ಸರಸರ ಸರಿಯಿತು
ಜೋಗುಳ ಹಾಡಿತು ಬೀಸುವ ಗಾಳಿಯು
ಬಾಗುತ ತರುಲತೆ ಹೂಗಳನರಳಿಸಿ ಸ್ವಾಗತ ಕೋರುತಿದೆ
ಬೇವಿನ ಜತೆಯಲಿ ಬೆಲ್ಲವ ಸೇರಿಸಿ
ಮಾವಿನ ಸೊಪ್ಪಿನ ತೋರಣ ಕಟ್ಟುತ
ದೇವರ ಸೇವೆಗೆ ತರತರ ಹೂಗಳ ಸೇರಿಸಿ ಹೆಣೆಯುವರು
ಬಾವಿಯ ನೀರನು ಹಂಡೆಗೆ ತುಂಬಿಸಿ
ಬೇವಿನ ಸೊಪ್ಪನು ಕೂಡಿಸಿ ಕುದಿಸುತ
ದೇವನ ಪೂಜೆಗೆ ಮಡಿಯಲಿ ವಿಧವಿಧ ಭಕ್ಷ್ಯವ ಮಾಡುವರು
ಕುಸುಮವ ಬಿಡಿಸುತ ಮಾಲೆಯ ಮಾಡುತ
ಹೊಸತನ ತುಂಬುತಲೆಲ್ಲರು ಕೂಡುತ
ವಿಷುವಿನ ದಿನದಲಿ ಕಣಿಯನು ದೇವರ ಮನೆಯಲಿ ನೋಡುವರು
ಹೊಸಹೊಸ ಬಟ್ಟೆಯ ಧರಿಸುತಲಿರುತಲಿ
ಕುಸಿಯುವ ಮನಸಿಗೆ ಭರವಸೆ ತುಂಬುತ
ಬಿಸಿಬಿಸಿ ತಿಂಡಿಯ ಮಾಡುತ ಖುಷಿಯಲಿ ಮಂದಿಗೆ ಹಂಚುವರು
ಬಂದಿದೆ ವರುಷದ ಮೊದಲಿನ ಹಬ್ಬವು
ತಂದಿದೆ ಬುವಿಯಲಿ ಹಸಿರಿನ ಕ್ರಾಂತಿಯ
ಮಂದಿಯರೆಲ್ಲರು ಜತೆಯಲಿ ಸೇರುತ
ಹಾಡುತ ಕುಣಿಯುತಲಿ
ಕುಂದಿದ ಜೀವಕೆ ಹುರುಪನು ಮೂಡಿಸಿ
ಚಂದದಿ ತರುಣಿಯರೆಲ್ಲರು ಸೇರುತ
ಹೊಂದಿಸಿ ಬಿಡುವರು ಮನೆಜನರೆಲ್ಲರ ತಮ್ಮಯ ನಗುವಿನಲಿ
ಪಂಕಜ ಕೆ.ರಾಮ ಭಟ್
ಮುಡಿಪು
Comments
Post a Comment