ಬಾಳ ದೋಣಿಗೆ ನೀ ಜತೆಯಾದೆ
ವರಾಂಡದ ಆರಾಮ ಕುರ್ಚಿಯಲ್ಲಿ ಕುಳಿತು ಪೇಪರ್ ಓದುತ್ತಿದ್ದ ಚರಣ್ ನ ಮನ ಹಕ್ಕಿಯಂತೆ ಹಾರಾಡುತ್ತಿತ್ತು ಬಾಯಿ ಕವಿತೆಯೊಂದನ್ನು ಗುಣುಗುಣಿಸುತ್ತಿದ್ದರೂ, ಮನಸ್ಸು ಮುದ್ದಿನ ಮಡದಿಯ ಸಾಮಿಪ್ಯ ಬಯಸುತ್ತಿತ್ತು.
ನನ್ನಾಸೆಯ ಹೂವೆ ಒಲವಿನ ಚಕೋರಿಯೇ
ಬಾಳ ದೋಣಿಗೆ ನೀ ಜತೆಯಾದೆ
ನನ್ನಾಸೆ ಎಲ್ಲಾ ನೀನಾದೆ ಚೆಲುವೆ
ಮೆಲ್ಲಗೆ ರಾಗವಾಗಿ ಹಾಡುತ್ತಾ ಇದ್ದವನನ್ನು ಎಚ್ಚರಿಸಿದ್ದು ಬಿಸಿ ಬಿಸಿ ಕಾಫಿ ಹಿಡಿದು ಬಂದ ಮಡದಿಯ ನಗು ಮುಖ . ಆ ಸ್ನಿಗ್ಧ ಸುಂದರ ಮುಖ ಕಂಡಾಗಳೆಲ್ಲಾ ಅವನ ಕಣ್ಣು ಹೊಳೆಯುತ್ತಿತ್ತು.ಇಂದು ಆದೇ ರೀತಿ ಆಗಿ ಖುಷಿಯಿಂದ ಕಾಪಿ ಪಡೆದು ಹೆಂಡತಿಯ ಕೈಯನ್ನು ಮೃದುವಾಗಿ ಎಳೆದ . ಗಂಡನ ಅನಿರೀಕ್ಷಿತ ವರ್ತನೆಯಿಂದ ಆಯತಪ್ಪಿ ಆಕೆ ದೊಪ್ಪೆಂದು ಅವನ ತೊಡೆಯ ಮೇಲೆ ಬಿದ್ದಳು. ಕೂಡಲೇ ಕಾಪಿಯನ್ನು ಟೀಪಾಯಿ ಮೇಲೆ ಇಟ್ಟ ಚರಣ್, ಮಡದಿಯನ್ನು ಬಳಸಿ ಕೆನ್ನೆಗೆ ಮೃದುವಾಗಿ ಮುತ್ತಿಟ್ಟ.ಹುಸಿಮುನಿಸಿನಿಂದ ಸೌಮ್ಯ ತಟ್ಟನೆ ಗಂಡನ ಕೈ ಬಿಡಿಸಿಕೊಂಡು ಏಳಲು ಹೋದಾಗ ಆತ ಅವಳನ್ನು ಇನ್ನಷ್ಟು ಬಿಗಿಯಾಗಿ ಹಿಡಿದುಕೊಂಡು ಎಲ್ಲಿಗೆ ಹೋಗುವೆ ನನ್ನ ಮುದ್ದಿನ ರಾಣಿ ಎಂದು ಕೆನ್ನೆ ಹಿಂಡಿದ ಗಂಡನ ಹಾಡು ಕೇಳಿ ನಾಚಿಕೆಯಿಂದ ಸೌಮ್ಯಳ ಮುಖ ಟೊಮ್ಯಾಟೋ ಹಣ್ಣಿನಂತೆ ಕೆಂಪಾಯಿತು .ಅಯ್ಯೋ ಬಿಡಿ ಬೆಳ್ಳಂಬೆಳಗ್ಗೆ ನಿಮಗೆ ಇಂದು ಏನಾಗಿದೆ ಅಲ್ಲಿ ಅಡಿಗೆ ಮನೆಯಲ್ಲಿ ಪಾಪ ಸ್ನೇಹ ಒಬ್ಬಳೇ ಕೆಲಸ ಮಾಡುತ್ತಿದ್ದಾಳೆ ,ಮೊಮ್ಮಗು ಬರುವ ಸಮಯವಾದರೂ ನಿಮ್ಮ ತುಂಟಾಟ ಕಡಿಮೆಯಾಗಲಿಲ್ಲ ಎಂದು ಹುಸಿಮುನಿಸಿನಿಂದ ಏಳಲು ಹೋದ ಮಡದಿಯನ್ನು ಪ್ರೀತಿಯಿಂದ ದಿಟ್ಟಿಸುತ್ತಿದ್ದ ಚರಣ್ ನನಗೇನೋ ಮಗ ಫ್ಯಾಕ್ಟರಿ ಕೆಲಸದಿಂದ ನಿವೃತ್ತಿ ಕೊಟ್ಟ ನಿನಗೆ ಈ ಅಡಿಗೆ ಮನೆಯಿಂದ ಯಾವಾಗ ನಿವೃತ್ತಿ ಎಂದು ನಗೆಯಾಡಿದ. ಸೌಮ್ಯ ಅಯ್ಯೋ ನಿವೃತ್ತಿ ತೆಗೆದುಕೊಂಡು ನಾನೇನು ಮಾಡಲಿ ಕೈ ಕಾಲು ಗಟ್ಟಿ ಇರುವತನಕ ಮಾಡುವುದು ಮುಂದೆ ನಿವೃತ್ತಿಯಾಗಿ ಕುಳಿತುಕೊಳ್ಳುವುದು ಇದ್ದೆ ಇದೆ ಪಾಪ ಸ್ನೇಹ ಎಷ್ಟೆಂದು ಒಬ್ಬಳೇ ಮಾಡುವುದು ಅವಳು ಈಗ ಬಸುರಿ ಹುಡುಗಿ ಕೆಲಸಮಾಡಬೇಡ ಎಂದು ಹೇಳಿದರೆ ಕೇಳುವುದಿಲ್ಲ ಸುಮ್ಮನೆ ಕೂತರೆ ಹೆರಿಗೆ ಕಷ್ಟವೆಂದು ಕೆಲಸಕ್ಕೆ ಬೇಡ ಬೇಡ ಎಂದು ಹೇಳಿದರೂ ಕೇಳದೆ ಬರುತ್ತಾಳೆ ಎಂದು ಹೇಳಿ ಎದ್ದು ನಿಂತರು
.ತಮ್ಮ ಸೊಸೆ ಸ್ನೇಹ ಎಲ್ಲಾ ನಮ್ಮ ಸೌಮ್ಯಳಂತೆಯೇ ಅತ್ತೆ ಮಾವ ಎಂದರೆ ತನ್ನ ತಂದೆ ತಾಯಿಯಂತೆ ಪ್ರೀತಿಯಿಂದ ಉಪಚರಿಸುತ್ತಾಳೆ ಎಂದು ಯೋಚಿಸುತ್ತಿದ್ದಾಗ , ಚರಣ್ ನ ಮನಸ್ಸು ಹಿಂದಕ್ಕೋಡಿತು
ಚಿಕ್ಕಂದಿನಿಂದಲೂ ಕಷ್ಟದಲ್ಲೇ ಬೆಳೆದ ಚರಣ್ ತನ್ನ ಸ್ವಂತ ಪರಿಶ್ರಮದಿಂದ ದೊಡ್ಡ ಕಂಪನಿಯನ್ನು ಕಟ್ಟಿ ಸಾವಿರಾರು ಜನರಿಗೆ ಅನ್ನದ ದಾರಿಯನ್ನು ತೋರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದನು. ತನ್ನನ್ನು ಸಾಕಿ ಸಲಹಿದ ತಂದೆ ತಾಯಿಯರನ್ನು ವೃದ್ದಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕಾದುದು ತನ್ನ ಕರ್ತವ್ಯ ಎಂದು ತಿಳಿದ ಆತ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.
ಹೀಗಿರುವಾಗ ಅದೊಂದು ದಿನ ಆಕಸ್ಮಿಕವಾಗಿ ಪರಿಚಯವಾದ ಸುಶ್ಮಿತಾಳ ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದು ಅವಳನ್ನು ರಿಜಿಸ್ಟರ್ ಮದುವೆಯಾಗಿ ತನ್ನ ಮನೆಗೆ ಕರೆತಂದ .ತಂದೆ ತಾಯಿಯರಿಗೆ ಮಗನ ನಡತೆ ಬೇಸರವಾದರೂ ಅವನ ಇಷ್ಟಕ್ಕೆ ವಿರುದ್ಧವಾಗಿ ಹೋಗಲು ಆಗದೆ ಸುಮ್ಮನಾದರು .ಮನೆಗ ಬಂದ ಸುಶ್ಮಿತಾಳಿಗೆ ಆಘಾತವಾಗಿತ್ತು. ಮನೆಯಲ್ಲಿ ತಾವಿಬ್ಬರೇ ಇರುವುದು ಎನ್ನುವ ಕಲ್ಪನೆಯಲ್ಲಿ ಇದ್ದ ಸುಶ್ಮಿತಾಳಿಗೆ ವೃದ್ಧರು ಇರುವುದು ಕಂಡು ಅಸಹನೆಯುಂಟಾಯಿತು .
ಚರಣ್ ಎಷ್ಟೇ ತಿಳಿಸಿ ಹೇಳಿದರೂ ಕೇಳದ ಆಕೆ ನಾನು ಬೇಕಾದರೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಹಠ ಹಿಡಿದಳು .ಅವಳ ಹಠಕ್ಕೆ ಸೋಲಲು ಮನಸು ಇಲ್ಲದ ಚರಣ್ ಸುಶ್ಮಿತಾಳಿಗೆ ಅವಳ ಎಲ್ಲಾ ಬಟ್ಟೆ ಬರೆಗಳನ್ನು ಪ್ಯಾಕ್ ಮಾಡಲು ಹೇಳಿದನು ಸುಶ್ಮಿತಾಳಿಗೆ ಗಂಡನ ನಡೆ ಆಶ್ಚರ್ಯವನ್ನು ಉಂಟು ಮಾಡಿತು .ಇದೇನು ನಿಮಗೆ ನನಗಿಂತ ಅವರೇ ಹೆಚ್ಚಾಯಿತೆ ತಂದೆ ತಾಯಿಯರನ್ನು ಬಿಟ್ಟು ಬಂದ ನನ್ನನ್ನು ಹೊರಗೆ ಹಾಕಿದರೆ ನಾನೆಲ್ಲಿ ಹೋಗಲಿ ಎಂದು ಕೇಳಿದಳು .ಅದಕ್ಕೆ ಚರಣ್ ನನ್ನ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಸಾಧ್ಯವಿಲ್ಲ ,ಯಾಕೆಂದರೆ ಇಲ್ಲಿ ಇರುವ ಎಲ್ಲವೂ ಅವರದೇ ನಾನು ಕೇವಲ ಕಂಪೆನಿಯಲ್ಲಿ ಸಂಬಳ ತೆಗೆದುಕೊಳ್ಳುವ ನೌಕರ .ನಿನಗೆ ನಮ್ಮೊಡನೆ ಇರಲು ಆಗದಿದ್ದರೆ ನೀನು ಅನಾಥಾಶ್ರಮಕ್ಕೆ ಹೋಗು ಅಥವಾ ನಿನ್ನ ತಂದೆ ತಾಯಿ ಇರುವಲ್ಲಿಗೆ ಹೋಗು ಎಂದು ನಿಷ್ಟುರವಾಗಿ ಹೇಳಿದನು
.ಇವರ ಜಗಳ ಕಂಡ ತಂದೆ ತಾಯಿ ಏನೋ ಹೇಳಲು ಬಂದರೆ ,ಅಮ್ಮ ಅಪ್ಪ ನೀವು ಮಾತನಾಡಬೇಡಿ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ ನಿಮ್ಮನ್ನು ವೃದ್ಧಾಶ್ರಮದಲ್ಲಿ ಬಿಟ್ಟು ನಾನು ಹೇಗೆ ತಾನೇ ಖುಷಿಯಲ್ಲಿ ಇರಬಲ್ಲೆ ಹೇಳಿ ಎಂದು ಹೇಳುತ್ತಾನೆ .ಮಗನಿಗೆ ತಮ್ಮ ಮೇಲೆ ಇರುವ ಪ್ರೀತಿ ಕಂಡು ಖುಷಿ ಆದರೂ ತಮ್ಮಿಂದಾಗಿ ಅವನ ವೈವಾಹಿಕ ಜೀವನ ಹಾಳಾಗುತ್ತದಲ್ಲ ಎನ್ನುವ ಬೇಸರವೂ ಅವರನ್ನು ಕಾಡುತ್ತಿತ್ತು ಆದರೆ ಅವರು ಅಸಹಾಯಕರಾಗಿದ್ದರು.
ಸಿಟ್ಟಿನಲ್ಲಿ ಮನೆ ಬಿಟ್ಟು ಹೋದ ಸುಶ್ಮಿತಾ ಕೆಲವೇ ದಿನಗಳಲ್ಲಿ ಅವನಿಂದ ಅಪಾರ ಮೊತ್ತದ ಹಣವನ್ನು ಕೇಳಿ ಡೈವೋರ್ಸ್ ಗೆ ಹಾಕಿದಳು ಇದರಿಂದ ವಿಚಲಿತನಾದ ಚರಣ್ ಅವಳ ಪೂರ್ವಾಪರ ವಿಚಾರಿಸಲು ಅವಳು ಈಗಾಗಲೇ ಹೀಗೆ ತುಂಬಾ ಮಂದಿಗೆ ವಂಚಿಸಿರುವುದು ತಿಳಿದು ಸರಿಯಾದ ವಕೀಲರ ಮುಖಾಂತರ ಅವಳಿಂದ ಬಿಡುಗಡೆ ಪಡೆದ .ಇದನ್ನು ಮೊದಲೇ ವಿಚಾರಿಸದೆ ಅವಳ ಮಾತು ಕೇಳಿ ತಂದೆ ತಾಯಿಯರಿಗೂ ತಿಳಿಸದೆ ಮದುವೆಯಾದ ತನಗೆ ತಕ್ಕ ಶಾಸ್ತಿಯಾಯಿತೆಂದು ಆತ ಬೇಸರ ಪಟ್ಟುಕೊಂಡ .
ಇದರ ನಂತರ ಹುಡುಗಿಯರನ್ನು ಕಂಡರೆ ಸಿಡಿದೇಳುತ್ತಿದ್ದ ಚರಣ್ ನನ್ನು , ತಂದೆ ತಾಯಿಯರನ್ನು ನೋಡಿಕೊಳ್ಳಲೆಂದು ಬಂದ ಸೌಮ್ಯ ಸ್ವಭಾವದ ಸೌಮ್ಯ ಆಕರ್ಷಿಸಿ ಬಿಟ್ಟಳು ಆದರೂ ತನಗಾದ ಅನುಭವದಿಂದ ಅವಳನ್ನು ದೂರವೇ ಇಟ್ಟಿದ್ದ ಚರಣ್ ನನ್ನು ಅವರ ತಾಯಿ ಅದೊಂದು ದಿನ ಹತ್ತಿರ ಕುಳ್ಳಿರಿಸಿ ತಮ್ಮ ನಂತರ ನಿನ್ನ ಬಾಳು ಒಂಟಿಯಾಗುವುದು ನಮಗಿಷ್ಟವಿಲ್ಲ 2 ವರ್ಷದಿಂದ ಸೌಮ್ಯಳ ಸ್ವಭಾವವನ್ನು ನೋಡುತ್ತಿದ್ದೇನೆ ಇವಳು ನಮ್ಮ ಮನೆಗೆ ಹೇಳಿ ಮಾಡಿಸಿದ ಹುಡುಗಿ ತಂದೆ ತಾಯಿ ಯಾರೂ ಇಲ್ಲದೆ ಅನಾಥಾಶ್ರಮದಲ್ಲಿ ಬೆಳೆದುದರಿಂದ ಕಷ್ಟ ಸುಖದ ಅರಿವಿದೆ ಎಂದು ಹೇಳಿ ಒತ್ತಾಯಿಸಿ ಮದುವೆ ಮಾಡಿದರು ..
ಮದುವೆ ಆದಮೇಲೆಯು ಸೌಮ್ಯ ವೃದ್ಧ ಅತ್ತೆ ಮಾವಂದಿರ ಸೇವೆಗೆ ತನ್ನ ಮೊದಲ ಆದ್ಯತೆಯನ್ನು ಕೊಟ್ಟು ದಕ್ಷತೆಯಿಂದ ಮನೆಯನ್ನು ನಡೆಸಿ ಚರಣ್ ನ ಮನಗೆದ್ದು ಮೆಚ್ಚಿನ ಮಡದಿಯಾದಳು. ಸ್ವಾಮ್ಯಳ ಪ್ರೀತಿಯ ಉಪಚಾರದಿಂದ ತಕ್ಕ ಮಟ್ಟಿಗೆ ನಡೆದಾಡುವಂತಾದ ತಂದೆ ತಾಯಿಯರನ್ನು ಕಂಡು ಸಂತೋಷಪಟ್ಟ ಚರಣ್ ಸೌಮ್ಯಳನ್ನು ಎತ್ತಿ ಮುದ್ದಾಡಿದ.
ಅಷ್ಟರಲ್ಲಿ ಸೌಮ್ಯ ಅವನ ಕೈಗಳಲ್ಲಿಯೇ ಆಯಾಸದಿಂದ ಕಣ್ಣು ಮುಚ್ಚಿದ್ದುಕಂಡು ಹೆದರಿಕೆಯಿಂದ ಕೂಡಲೇ ಡಾಕ್ಟರ್ ರನ್ನು ಫೋನ್ ಮಾಡಿ ಕರೆಸಿದ..ಡಾಕ್ಟರ್ ಬಂದು ಕೂಲಂಕಷವಾಗಿ ಪರೀಕ್ಷಿಸಿದಾಗ ಸೌಮ್ಯ ತಾಯಿಯಾಗುವ ವಿಷಯ ತಿಳಿದು ತುಂಬಾ ಸಂತಸ ಪಟ್ಟು ಅವಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳಲು ಪ್ರಾರಂಭಿಸಿದ. ಸಂತೋಷದ ಸುದ್ದಿ ತಿಳಿದ ತಂದೆ ತಾಯಿ ಇಬ್ಬರಿಗೂ ಮತ್ತೆ ಹರೆಯ ಮರುಕಳಿಸಿತು. ಮೊಮ್ಮಗ ಹುಟ್ಟಿದ ಸಂಭ್ರಮವನ್ನು ಹೆಚ್ಚು ದಿನ ಅನುಭವಿಸಲಾಗದೆ ಮಗ ಗಿರೀಶ 5 ವರ್ಷದವನಾದಾಗ ತಂದೆ ತಾಯಿ ಇಬ್ವರೂ ಒಬ್ಬರ ನಂತರ ಒಬ್ಬರಂತೆ ಹೊರಟು ಹೋದಾಗ ಎಲ್ಲವನ್ನು ಕಳೆದು ಕೊಂಡಂತೆ ದುಃಖಿಸುತ್ತಿದ್ದ ತನ್ನನ್ನು ಸಮಾಧಾನಿಸಿ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದು ಸೌಮ್ಯ ನೆ .
ಅಂತೂ ತಂದೆತಾಯಿಯರನ್ನು ವೃದ್ದಾಪ್ಯದಲ್ಲಿ ಚೆನ್ನಾಗಿ ನೋಡಿ ಕೊಂಡಿದ್ದ ಫಲ ಅವರ ಆಶೀರ್ವಾದದಿಂದ ತಮಗೀಗ ಒಳ್ಳೆಯ ಮಗ ಸೊಸೆ ಸಿಕ್ಕಿದ್ದಾರೆ ಎಂದು ಚರಣ್ ಸಂತಸಪಟ್ಟು ಸ್ನಾನಮಾಡಿ ದೇವರ ಪೂಜೆ ಮಾಡಲು ಎದ್ದು ರೂಮಿಗೆ ಹೊರಟುಹೋದರು
ಪಂಕಜಾ.ಕೆ. ಮುಡಿಪು
Comments
Post a Comment