ಗೆಳೆತನ
ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು
ಜತೆಯಾದೆ ನೀ ನನ್ನ ಕನಸುಗಳ ಸೆಳೆದು
ನೋಯುವ ಮನಸಿಗೆ ತಂಗಾಳಿಯಾದೆ ನೀನು
ನಿನ್ನೊಲವ ಸಾಂತ್ವನಕೆ ಮೈಮರೆತೆ ನಾನು
ಏಕಾಂತದ ಒಂಟಿತನಕೆ ಜತೆಯಾದೆಯಲ್ಲ
ಕನಸಿನ ಗೋಪುರವ ನೀ ಕಟ್ಟಿದೆಯಲ್ಲ
ಹೊಸತನವ ತುಂಬುತಾ ಮನಸೂರೆಗೊಂಡೆ
ಸ್ನೇಹವೆಂಬ ಅಮೃತದ ಜಲದಲ್ಲಿ ನಾ ಮುದಗೊಂಡೆ
ಗೆಳೆತನವೆಂಬ ದೋಣಿಯಲಿರುವ ತಂಪು
ಬಾಳದೋಣಿಯಲೂ ಅದರದೇ ಇಂಪು
ಕಷ್ಟ ಸುಖ ಎಲ್ಲಕ್ಕೂ ಜತೆಯಾಗುವ ನಂಟು
ಬಿಡಿಸಲಾರದ ಬಂಧ ಸ್ನೇಹದಾ ಗಂಟು
ಕಂಡ ಕನಸಿಗೆ ನೀಹಿಡಿದೆ ಕನ್ನಡಿ
ನೊಂದ ಮನಸಿಗೆ ನೀ ಬರೆದೆ ಮುನ್ನುಡಿ
ನಗುವ ಹಿಂದಿನ ನೋವ ಮರೆಸುತಿದೆ ಸ್ನೇಹ
ಕತ್ತಲೆಯ ಹಾದಿಗೆ ಮುಂಬೆಳಕು ಸ್ನೇಹ
ಶ್ರೀಮತಿ.ಪಂಕಜಾ.ಕೆ.ರಾಮಭಟ್
Comments
Post a Comment