Skip to main content

ಲೇಖನ ಇತ್ಯಾದಿ

[3/3/2022, 6:00 pm] Pankaja K: ಚಿತ್ರಕ್ಕೊಂದು ಲೇಖನ
 
 ಸ್ವಾವಲಂಬನೆಯ ಜೀವನ

ಅಪಘಾತದಲ್ಲಿ  ಕಾಲುಗಳೆರಡನ್ನು ಕಳೆದು ಕೊಂಡಿದ್ದರೂ ಆತ್ಮವಿಶ್ವಾಸವನ್ನು ಕಳೆದು ಕೊಳ್ಳದೆ  ಗಾಲಿಖುರ್ಚಿಯಲ್ಲಿ ಕುಳಿತು  ಸ್ವಾವಲಂಬನೆಯ ಜೀವನವನ್ನು ನಡೆಸುತ್ತಿರುವ  ತರುಣನೊಬ್ಬನ ಚಿತ್ರ ಇಂದಿನ ಲೇಖನದ ವಿಷಯವಾಗಿದೆ .
            ಎಷ್ಟೋ ಜನ ಹಣದ ಮದದಿಂದ  ಸೋಮಾರಿಗಳಾಗಿ ಕುಡಿತ ಮಾದಕ ವ್ಯಸನದ ದಾಸರಾಗಿ ಭೂಮಿಗೆ   ಭಾರವಾಗಿ ಹೆತ್ತ  ತಂದೆ ತಾಯಿಯರಿಗೆ ತಲೆನೋವಾಗಿ ಇರುತ್ತಾರೆ  ಅಂತಹವರ  ಮುಂದೆ  ಅಂಗವಿಕಲನಾಗಿದ್ದರೂ ಯಾರಿಗೂ ಭಾರವಾಗದೆ ತನ್ನ ಅನ್ನವನ್ನು ತಾನು ದುಡಿದು ತಿನ್ನಲು ಗಾಲಿ ಖುರ್ಚಿಯಲ್ಲಿ  ಕುಳಿತು ಸರಕುಗಳ ಮಾರಾಟ ಮಾಡುವ ತರುಣನ  ಸ್ವಾವಲಂಬಿ ಜೀವನವನ್ನು ಮೆಚ್ಚಲೇ ಬೇಕು.
            ಆತ್ಮವಿಶ್ವಾಸ,  ಸಾಧಿಸುವ ಛಲ ವಿದ್ದರೆ ಅಂಗವಿಕಲತೆಯನ್ನು ಮೆಟ್ಟಿ ನಿಲ್ಲಬಹುದು.  ತಾನು ಯಾರಿಗೂ  ಭಾರವಾಗದೆ ದುಡಿದು ಉಣ್ಣುವ ಇಂತಹವರನ್ನು ಗೌರವಿಸಿ ಅವರಿಂದ ಸರಕುಗಳನ್ನು ಕೊಂಡು ಅವರನ್ನು ನಾವು ಪ್ರೋತ್ಸಾಹಿಸಬೇಕು  ಅವರ ಕನಸುಗಳಿಗೆ ರೆಕ್ಕೆ ಕಟ್ಟುವ ಕೆಲಸವನ್ನು ಮಾಡಿ ಅಂಗವಿಕಲತೆ ಶಾಪವಲ್ಲವೆನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಚಿತ್ರದ ತರುಣನಂತೆ ಪ್ರತಿಯೊಬ್ಬ ಅಂಗವಿಕಲನೂ ತನ್ನ ಅಂಗವಿಕಲತೆಯನ್ನು ಮೆಟ್ಟಿ ಬದುಕು ಕಟ್ಟಿ ಕೊಳ್ಳುವ ಕಲೆ ಕಲಿತರೆ ಅಂಗವಿಕಲತೆ ಅವರಿಗೆ ಶಾಪವಾಗದೆ  ಅವರ ಜೀವನ ಸುಂದರವಾಗಿ ರೂಪುಗೊಳ್ಳುವುದು
            ಪಂಕಜಾ.ಕೆ. ಮುಡಿಪು
[6/3/2022, 8:13 pm] Pankaja K: ಗುರುಕುಲಾ ಚಾಮರಾಜನಗರ ಘಟಕ
 ಸ್ಪರ್ಧೆಗಾಗಿ ಕವನ

 ವಿಷಯ ..ಸ್ತ್ರೀ ಶಕ್ತಿ
  
ಮಮತಾಮಯಿ
  
 ತನ್ನ ಮಮತೆಯ ಹಂಚುತಿರುತಲಿ
ಬನ್ನ  ಪಡುತಲಿ ದುಡಿಯುತಿರುವಳು
ಚೆನ್ನ ಬಯಸುತ ಸಕಲ ಜನರಿಗೆ
ಕಣ್ಣ  ಕಂಬನಿ ಒರೆಸಿ ನಗುತಿಹಳು

ತಾಯಿ ತಂಗಿ ಅಕ್ಕನೆಂಬುವ
ವಿವಿಧ  ರೂಪದಿ ಬಾಳು ಸವೆಸುತ
ಶಾಂತಿ ಸಹನೆಯ ತೋರಿ ಮನೆಯಲಿ
ಬಣ್ಣ ತುಂಬುವಳವಳು  ಬಾಳ ದಾರಿಯಲಿ

ದೇಶ ಕಾಯುವ ವೀರ ನಾರಿಯು
ಒಳಗೆ ಹೊರಗೂ ದುಡಿಯುತಿರುವಳು
ಹೆಣ್ಣು ಮನೆಯ ಕಣ್ಣಿನಂತಿರುತ
ಜಗವ ಬೆಳಗುವಳು
 

ಹೆಣ್ಣು ಇಲ್ಲದ ಮನೆಯು ಮಸಣವು
ಹೆಣ್ಣು ದೇವತೆಯಂತೆ ಇರುವಳು
ಜಗದ  ಸೃಷ್ಟಿಗೆ ಹೆಣ್ಣು ಮೂಲವು
ಕಣ್ಣಿನಂತೆಯೇ ಕಾಯಬೇಕವಳನ್ನು 

ಪಂಕಜಾ. ಕೆ.ಮುಡಿಪು
[13/3/2022, 8:36 pm] Pankaja K: ಗುರುಕುಲಾ ಕಲಾಪ್ರತಿಸ್ಥಾನ 
 ಜಿಲ್ಲಾ ಘಟಕ ಕೊಡಗು 
 ಸ್ಪರ್ಧೆಗಾಗಿ   ರುಬಾಯಿ

ವಿಷಯ.. ಮಹಿಳೆ
 
ಸೃಷ್ಟಿಯ ಅದ್ಭುತವು ಮಹಿಳೆ
ಅವಳಿದ್ದರೆ ಮನೆಗೆ ಖಳೆ
ಸುಖ ಸಂಸಾರದ ಕಣ್ಣವಳು
ಜೀವ ಜಗದ  ಮಾತೆ ಅವಳೆ


(ಪ್ರತಿಯೊಂದು  ಸಾಲಿನಲ್ಲಿ 10 ಅಕ್ಷರ)

ಪಂಕಜಾ.ಕೆ. ಮುಡಿಪು
[27/3/2022, 5:38 pm] Pankaja K: ಗುರುಕುಲಾ ಕೊಡಗು ಘಟಕ
ಚುಟುಕು ರಚನಾ ಸ್ಪರ್ಧೆಗಾಗಿ
ಆದಿ  ಅಂತ್ಯ ಪ್ರಾಸ  ನಾಲ್ಕು ಪದ ನಾಲ್ಕು ಚರಣದ ಚುಟುಕು
ದತ್ತಪದ. ಅಬ್ಬರ

ಅತಿವೃಷ್ಟಿ

ಗಾಳಿಯ ಅಬ್ಬರಕೆ ಗಿಡಮರಗಳು   ಧರೆಗುರುಳಿದವು
ಮಳೆಯ  ರಭಸಕೆ  ಕೆರೆಕಟ್ಟೆಗಳು ಒಡೆದವು
ಬೆಳೆದ ಬೆಳೆಗಳು  ಧರೆಯೆಡೆ ಬಾಗಿದವು
ಇಳೆಯ ಸಕಲವೂ ಅತಿವೃಷ್ಟಿಗೆ ನಲುಗಿದವು

ಪಂಕಜಾ.ಕೆ. ಮುಡಿಪು
[1/4/2022, 3:35 pm] Pankaja K: ಜ್ಞಾನ ದೀವಿಗೆ 
 ಸ್ಪರ್ಧೆಗಾಗಿ ಕವನ
ಹೊಸವರುಷದ ಹೊಸ ಯೋಜನೆ

   ನಿರ್ಧಾರ

ಹೊಸ ವರುಷದ  ಹೊಸ  ಯೋಜನೆಯೊಂದು 
ರೂಪವು ಗೊಂಡಿತು ಮನದಲ್ಲಿ
ನೀರನು ಉಳಿಸುತ ಗಿಡಮರ ಬೆಳೆಸುತ
ಪ್ರಕೃತಿಯ ಉಳಿಸಲು ಮನವನು ಮಾಡುವೆನು

ಅನ್ನವ ಚೆಲ್ಲದೆ ಹಸಿದವರಿಗೆ ಉಣಿಸುತ
ಬನ್ನವ ಪಡುತಿಹ ರೈತಗೆ ನಮಿಸುತ
ಚೆನ್ನವ ಬಯಸುತ ಒಳಿತನು ಮಾಡುತ
ಮನ್ನಣೆ  ಕೊಡುವೆನು ನೇಗಿಲಯೋಗಿಗಳಿಗೆ

ಬೇವು ಬೆಲ್ಲವ ಹಂಚುತ  ಜನರಿಗೆ
ಕಷ್ಟ ಸುಖದಲಿ ಹೆಗಲಾಗುವೆ ಅವರಿಗೆ
ಬಡವರ ಸೇವೆಯ ಮಾಡುತಲಿರುತಲಿ 
ನೊಂದವರ ಕಣ್ಣೀರ ಒರೆಸಲು ಕೈಗಳ ಜೋಡಿಸುವೆ

ಮಳೆಯ ನೀರನು ಹಿಡಿಯುತ ಇಂಗಿಸಿ
ಕಳೆಯನು ತೆಗೆಯುತ ಹೊಸತನು ಬಿತ್ತುತ
ಹಸಿರಿದ್ದರೆ  ಉಸಿರೆನ್ನುವ ಮಾತನು ಅರಿಯುತ
ಹಸಿರನು ಬೆಳೆದು ಮನೆಯಲಿ ನಲಿವನು ತುಂಬುವೆನು

ದೇಶದ ಸೇವೆಗೆ ಕಂಕಣ ತೊಡುತಿಹ
ಯೋಧರ ಜೀವಕೆ ಶುಭವನು ಕೋರುತ
ದೇವರ ಸೇವೆಯ ನಿತ್ಯವೂ ಮಾಡುತ
ಈಶನ ಚರಣಕೆ ಎರಗಿ ಭಕ್ತಿಯಲಿ ಬೇಡುವೆನು

ಪಂಕಜಾ.ಕೆ. ಮುಡಿಪು
[3/4/2022, 6:16 pm] Pankaja K: ಗುರುಕುಲಾ ಕೊಡಗು ಘಟಕ
ಸ್ಪರ್ಧೆಗಾಗಿ ಜಡೆಕವನ
ದತ್ತಪದ. ಯುಗಾದಿ

ಹೊಸವರ್ಷ

ಉಳಿಯುವುದು ನಮ್ಮ ಸಂಸ್ಕೃತಿ ಹಬ್ಬದಿಂದ 
ಹಬ್ಬದಿಂದ  ಮನೆ ಮಂದಿಯೆಲ್ಲಾ ಒಂದಾಗುವರು ಒಂದಾಗುವರು  ಹೊಸವರ್ಷದ ಯುಗಾದಿ  ದಿನ
ದಿನಪೂರ್ತಿ ಸಂತೋಷ ಸಂಭ್ರಮ ತುಂಬಲಿ
ತುಂಬಲಿ ಮನೆ ಮನದಲಿ ಬೇವು ಬೆಲ್ಲದ ಸವಿ
ಸವಿಯೋಣ ಪ್ರೀತಿಯನು ಹಂಚಿ ಒಂದಾಗಿ
ಒಂದಾಗಿ  ಬೆರೆಯೋಣ ಪ್ರಕೃತಿಯ ಜತೆಯಲಿ
ಜತೆಯಲಿ  ಕೂಡುತ ಗಿಡಗಳನು ನೆಡೋಣ
ನೆಡೋಣ ಎಲ್ಲೆಡೆ   ಹಸಿರು ಗಿಡ ಮರಗಳನು
ಗಿಡಮರಗಳಿದ್ದರೆ  ಧರೆಯು ಉಳಿಯುವುದು

ಪಂಕಜಾ.ಕೆ.  ಮುಡಿಪು
[3/4/2022, 9:14 pm] Pankaja K: ಗುರುಕುಲಾ ಚಾಮರಾಜನಗರ ಘಟಕ
ಸ್ಪರ್ಧೆಗಾಗಿ 
ಕವನ
ದತ್ತಪದ..ಗುರಿ

ಛಲವಿರಲಿ ಮನದಲಿ

ಗುರಿಯೊಂದು ಇರಲು ಮನದಲಿ
 ಬಾಳದಾರಿಯು ಸ್ಪಷ್ಟವು
ಗುರಿಯ ಸೇರುವಾತುರದಲಿ
ಹಾದಿ ಸಾಗಲು ಕಷ್ಟವು

ಪ್ರಯತ್ನದಿಂದ ಗೆಲುವ ಪಡೆಯುತ
ಗುರಿಯ ಸೇರಲು ಸಂತಸ
ಅರಿತು ನಡೆದರೆ ಜೀವನದಲಿ
ಸಿಕ್ಕೇ ಸಿಗುವುದು ಸಮರಸ

ಯಾವ ಕೆಲಸವೇ ಇರಲಿ 
ಹೆದರದೆ ಮುನ್ನುಗ್ಗಲು
ಮನುಜ ಪ್ರಯತ್ನಕೆ ಜಯವು ಸಿಗುವುದು
ಎದೆಗುಂದದೆ ಮುನ್ನಡೆಯಲು

ಕಲ್ಲು ಮುಳ್ಳುಗಳಿರಲು ಹಾದಿಯಲಿ
ಸರಿಸಿ ನಡೆಯಲು ಸಗ್ಗವು
ಬರಿದೆ  ಕುಳಿತರೆ  ಜಯವು ಸಿಗದು
ಛಲದಿ  ನಡೆಯಲು ಸ್ವರ್ಗವು

ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.
[4/4/2022, 6:23 pm] Pankaja K: ಜ್ನಾನದೀವಿಗೆ ಬಳಗ
ಸ್ಪರ್ಧೆಗಾಗಿ ಕವನ
ವಿಷಯ .. ಮಗುವಿನ ಜೀವನದಲ್ಲಿ ಗುರುವಿನ ಪಾತ್ರ

 ದಾರಿ ದೀಪ

ಹಸಿ ಮಣ್ಣಿನ ಮುದ್ದೆಯಂತಿರುವ
ಮುಗ್ಧ ಮಗುವಿನ ಮನವನು
ತಿದ್ದಿ ತೀಡುತ ವಿದ್ಯೆ ಬುದ್ಫಿ ಕಲಿಸಲು
ಬೇಕು ಗುರುವೆಂಬ ಜ್ಯೋತಿಯು

ತಪ್ಪು ಒಪ್ಪುಗಳನ್ನು ತಿಳಿಸುತ
ಗುರಿ ತೋರುವ ದೀಪವು
ಜ್ಞಾನದ ಕಿಡಿಯನು ಹೊತ್ತಿಸಿ
ಸುಜ್ಞಾನದ ಬೆಳಕನು ಬೆಳಗುವನು

ಅಂತರಂಗದಿ ಅರಿವು ಮೂಡಿಸಿ 
ಕಗ್ಗಲ್ಲಿಗೆ ಮೂರ್ತ ರೂಪವ ಕೊಡುವನು
ಜ್ಞಾನದೀವಿಗೆಯನ್ನು ಉರಿಸುತ
ಅಂದಾಕಾರವ  ತೊಲಗಿಸುವನು
 
 ಗುರುವಿನ ಮಾರ್ಗದರ್ಶನವಿರಲು
 ಗುರಿಯ ಸೇರವುದು ನಿಶ್ಚಯ
 ಮಗುವಿನ ಜೀವನದಲ್ಲಿ
 ಗುರುವಿನ ಪಾತ್ರ ಹಿರಿದಾಗಿದೆ
 
 ಶ್ರೀಮತಿ.ಪಂಕಜಾ.ಕೆ. ಮುಡಿಪು
 ಕುರ್ನಾಡು..ದ.ಕ.
[10/4/2022, 8:19 pm] Pankaja K: ಗುರುಕುಲಾ ಕಲಾಪ್ರತಿಸ್ಥಾನ ಜಿಲ್ಲಾ ಘಟಕ ಅಂತರರಾಜ್ಯ 
 ಸ್ಪರ್ಧೆಗಾಗಿ ಕವನ
 ದತ್ತಪದ.  ಭಾವದ ಭಿತ್ತಿ
 
ಮನದ ಪರದೆ

ಚಿತ್ತದ ತುಂಬಾ ಕನಸನು ಬಿತ್ತುತ
ಎತ್ತಲೋ ಸರಿಯಿತು  ಈ ಮನವು
ಬತ್ತದ ಭಾವವು ಎದೆಯಲಿ ತುಂಬಲು 
ಮೆತ್ತನೆ ಸೆಳೆಯಿತು ಮೈ ಮನವ

ಚಿತ್ತದ  ಬಿತ್ತಿಯ ಪರದೆಯ  ಮೇಲ್ಗಡೆ
ಸಾಗಿತು ಹಲವಿದ ವೇಷಗಳು
ಮೈ ಮನ ಮರೆಯುವ ಸುಂದರ ಭಾವವು
ತೆರೆಯಿತು ಎದೆಯಂಗಳದ ಸವಿ ನೆನಪುಗಳ

ಭಾವದ ಭಿತ್ತಿಯ ತುಂಬಾ ತುಂಬಿದೆ
 ನವ ನವೀನ ಕನಸುಗಳು
 ಅರಳುವ ಮನದಲಿ ಸೊಗವನು ತುಂಬುತ
 ಸುಂದರ ಕವನವ ಮೂಡಿಸಿತು

ಪಂಕಜಾ.ಕೆ. ಮುಡಿಪು
[10/4/2022, 8:57 pm] Pankaja K: ಗುರುಕುಲಾ ಕೊಡಗು ಘಟಕ
ಸ್ಪರ್ಧೆಗಾಗಿ ಕವನ
ದತ್ತಪದ. ಬಿಸಿಲ ಬೇಗೆ

ಹಸಿರಿದ್ದರೆ ಉಸಿರು 

 ಹಸಿರು ಮರಗಳು ತಲೆಯ ದೂಗುತ
 ಚಾಮರವನು ಬೀಸಲು
 ಬಿಸಿಲ  ಬೇಗೆಗೆ  ಬಳಲಿ  ಬಿಟ್ಟಿಹ
 ತನುವು ಪುಳಕಿತ ಗೊಂಡಿತು
 
 ಹಸಿರು ಗಿಡಮರ ಇರಲು ಧರೆಯಲಿ
 ತಂಪು ತರುವುದು ಮೈ ಮನಸಿಗೆ
 ಬೆಳೆಸಿ ಕೊಂಡರೆ  ಹಸಿರು ಕಾಡನು
 ಉಸಿರು ಸಿಗುವುದು  ಮನುಜಗೆ 

ಕಾಡು ಗುಡ್ಡವ  ಕಡಿದು ಒಗೆಯದೆ
ಉಳಿಸಿ  ಬೆಳೆಸುತಲಿರುತಿರೆ
ಧರೆಯ ಸೊಬಗದು ಕಣ್ಣು ತುಂಬುತ
 ಮೈಮನವನು   ಅರಳಿಸುವುದು
 
ಪಂಕಜಾ.ಕೆ. ಮುಡಿಪು
[24/4/2022, 3:22 pm] Pankaja K: ಗುರುಕುಲ ಕಲಾಪ್ರತಿಸ್ಥಾನ 
ಜಿಲ್ಲಾಘಟಕ ಚಾಮರಾಜನಗರ 

 ಸ್ಪರ್ಧೆಗಾಗಿ  ಕವನ 

 ವಿಷಯ.. ನಮ್ಮ ರಾಜ್ಯ  ಕರ್ನಾಟಕ 

ಭುವನೇಶ್ವರಿ

ಭುವನ ಗಿರಿಯಲ್ಲಿ ನೆಲೆಸಿರುವ ಮಾತೆ
ಕನ್ನಡದ ತಾಯಿ ಭುವನೇಶ್ವರಿ
ಎರಗುತಲಿ ಚರಣಕ್ಕೆಹಾಡುವೆನು ಅನುದಿನವೂ
ಕನ್ನಡವ ಉಳಿಸಿ  ಬೆಳೆಸುತ್ತಲಿ

ಕನ್ನಡ ನಾಡಿದು  ನಮ್ಮರಾಜ್ಯ  ಕರ್ನಾಟಕ
ಹೆಸರಾಗಿಹುದು  ಶಿಲ್ಪ ಕಲೆಗಳಿಗೆ
ಕಲೆ ಸಾಹಿತ್ಯಗಳ ತವರೂರಾಗಿದೆ
ಸಿರಿಗಂಧದ ನಾಡಿದು ಕರ್ನಾಟಕ

ಕವಿ ಕೋಗಿಲೆಗಳು   ಬಾಳಿದ ನಾಡಿದು
ಗಂಧವು ತುಂಬಿದೆ ಎಲ್ಲೆಡೆಯೂ
ಗಿರಿಕಂದರಗಳು ತುಂಬಿದ  ಬೀಡಿದು 
ಜುಳು ಜುಳು ಹರಿಯುತಿದೆ  ಪಾವನಗಂಗೆಯು

ಪಂಕಜಾ.ಕೆ. ಮುಡಿಪು
[15/5/2022, 5:29 pm] Pankaja K: ಗುರುಕುಲಾ ಕೊಡಗು ಘಟಕ
ಜಾನಪದ ಗೀತೆ ರಚನೆ ಸ್ಪರ್ಧೆಗಾಗಿ
ದತ್ತಸಾಲು. ಮುಂಗಾರು ಮಳೆಯ ಸಂಭ್ರಮ

ಹಸಿರುಟ್ಟ ಧರೆ

ಮುಂಗಾರು ಮಳೆಯ ಸಂಭ್ರಮದಾಗ
ನಲಿದಾಳ ಭೂತಾಯಿ ಹಸಿರುಟ್ಟು/ ಗಿಡಮರಗಳು
ಹೊಸ  ಮದುಮಗಳಂತೆ  ಕುಣಿದಾವ

ತಂಪಾದ ಗಾಳಿಯು ಸೊಂಪಾಗಿ ಬೀಸಲು
ಮೈ ಮನದ ಆಯಾಸ ಕಳೆದೈತೆ /ಸಗ್ಗದ
ಸಿರಿಯು ತುಂಬಿ ಎಲ್ಲೆಲ್ಲೂ  ಹಸಿರು ಚಿಗುರೈತೆ

ಬಿರುಬಿಸಿಲ ಬೇಗೆಗೆ ಬೆಂಡಾದ  ಭೂತಾಯಿ
ಮಳೆಯ  ಸಿಂಚನಕೆ ಮೈ ತೆರೆದಾಳ /ನಮ್ಮವ್ವ
ಚಿಗುರು ಹೂವು ತುಂಬಿ ತಲೆ ಬಾಗ್ಯಳ

ಮಳೆ ಬಂದು  ಭುವಿಯೆಲ್ಲಾ ತಂಪಾಗಿ
ಕೆರೆ ಕಟ್ಟೆ ಕೊಳಗಳು  ತುಂಬೈತೆ /ರೈತನ
ಮೊಗವು ಸಂತಸದಿ ಅರಲೈತೆ

ಕಾಡಿನ ಬದಿಯಲ್ಲಿ  ನವಿಲುಗಳು  ಕುಣಿದಾವ
ಗರಿ ಬಿಚ್ಚಿ ಹರುಷದಿ ನಲಿದಾವ/ಮೈಮನಕೆ 
ಉಲ್ಲಾಸ ತುಂಬಿ ಬಂದಾವ

ಹೆಗಲಿಗೆ ನೊಗವನ್ನು ಏರಿಸಿ ಹೊಂಟ್ಯಾನ 
ಓಬೇಲೆ ಹಾಡುತ್ತಾ  ಉಳುಮೆಯ ಮಾಡ್ಯಾನ/ರೈತ
ಹಸಿರನ್ನು ಬೆಳೆಯುತ್ತಾ ನಲಿದಾನ

ಕವಿಗಳ ಕಲ್ಪನೆಗೆ ಗರಿಗಳು  ಮೂಡೈತೆ
ಹೊಸ ಹೊಸ ಕವಿತೆ ಮೂಡುತೈತೆ /ಮನದಾಗ
ತುಂಬಿದ ಭಾವನೆಗಳು ಹೊರ ಹೊಮ್ಮುತೈತೆ

ಪಂಕಜಾ.ಕೆ. ಮುಡಿಪು
[4/6/2022, 3:36 pm] Pankaja K: ಗೈರ್ ಮುರದ್ದಪ್ ಗಜಲ್

ಪ್ರೀತಿ  ಎಂಬ ಮಾಯಾಜಾಲದಲ್ಲಿ ಸಿಕ್ಕಿ ನರಳಾಡದಿರು
ಮರಣ ಮೃದಂಗ ನುಡಿಸುವ ಕರಗಳಿಗೆ ಬೆರಳಾಗದಿರು

ಹೆತ್ತವರ ಮಮತೆ ವಾತ್ಸಲ್ಯವನ್ನು ಅರಿಯಲಾರೆಯಾ 
ಕಂಡವರ  ಬೆನ್ನ  ಹಿಂದೆ  ಹೋಗಿ ನೋವಿನಲಿ ಹೊರಳಾಡದಿರು

ಒಲವಿನ ಸೆಳೆತವನ್ನು ತಡೆದು ಗುರಿಯತ್ತ ಮುನ್ನುಗ್ಗು
ನಿನ್ನ ನೀನೇ  ಕೆಳಮಟ್ಟಕ್ಕೆ  ಇಳಿಸಿ ನಗೆಪಾಟಳಾಗದಿರು

ಮನೆತನದ ಪ್ರತಿಷ್ಠೆಯು ಮಣ್ಣಾಗದಂತೆ ಕಾಯಬೇಕಲ್ಲವೇ 
ವಂಚಕರ ಮೋಸದ ದಾಳಕ್ಕೆ ಸಿಲುಕುವ ಮೀನು ನೀನಾಗದಿರು

ಪಂಕಜಾಳಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ  ಅಭಿಮಾನವಿದೆ 
ಕಾಮಾಂಧರ ನರಕ ಕೂಪದಲ್ಲಿ ಬಿದ್ದು ಧರ್ಮ ಭ್ರಷ್ಟಳಾಗದಿರು

ಪಂಕಜಾ.ಕೆ. ಮುಡಿಪು
[4/6/2022, 6:39 pm] Pankaja K: ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು

ಜಿಲ್ಲಾ ಘಟಕ : ಬೆಂಗಳೂರು ನಗರ 

ವಾರಕ್ಕೊಂದು ಸ್ಪರ್ಧೆಗಾಗಿ:
 
ಪ್ರಕಾರ: ಭಾವಗೀತೆ ರಚನೆ ( ವನ್ಯ ಪರಿಸರ ಕುರಿತು )
ದತ್ತ ಪದಪುಂಜ :- "ಕ್ರೂರ ಮೃಗಗಳ ಜಾಡು"


     ಪ್ರಕೃತಿ ಹರಣ

ಕ್ರೂರ ಮೃಗಗಳ ಜಾಡು ಹಿಡಿಯುತ
ತೆರಳಿ ಬಿಟ್ಟನು ಕಾಡಿಗೆ
ಕಾಡ ಸಿರಿಯನು ಕಡಿದು ಒಗೆಯುತ
ಲಗ್ಗೆಯಿಟ್ಟನು ಬೀಡಿಗೆ

ವನ್ಯಮೃಗಗಳು ನೆಲೆಯು ಇಲ್ಲದೆ
ಓಡಿ ಬಂದವು ನಾಡಿಗೆ
ಗುಡ್ಡ ಬೆಟ್ಟಗಳು  ಹರಣವಾಗಲು
ಕುತ್ತು ಬಂದಿತು ಮನುಜಗೆ

ಹಸಿರು ಪರಿಸರವಿಲ್ಲದಿದ್ದರೆ
ಉಸಿರು ನಿಲ್ಲದೇ ನಿನ್ನದು
ಕಸಿದು ಕೊಳ್ಳದೆ ಬೆಳೆಸಿ ಕೊಂಡರೆ
ಸ್ವಚ್ಛ ಸುಂದರ ಬದುಕದು

ಕ್ರೂರ ಮಾನವನ ದುರಾಸೆಗೆ
ನಾಶವಾಯಿತು ಪರಿಸರ
ಮಾರಕ ರೋಗವು ಹಬ್ಬಿ ಹರಡುತ
ತಲ್ಲಣಿಸಿತು ಜೀವ ಸ್ಥಾವರ

 ಶ್ರೀಮತಿ.ಪಂಕಜಾ.ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.